*ಆಲೂರು ಪಟ್ಟಣದೊಳಗೆ ಭಾರಿ ವಾಹನಗಳ ಸಂಚಾರ ರಸ್ತೆಗಳು ಗುಂಡಿಮಯ : ಹೆದ್ದಾರಿ ಬಂದ್ ಮಾಡಿ ಚೌಲಗೆರೆ ಟೋಲ್ ಮುಚ್ಚಿಸುವ ಎಚ್ಚರಿಕೆ ನೀಡಿದ ಆಲೂರಿನ ನಾಗರೀಕರು*.



*ಸುದ್ದಿ ವಿಜಯ*


ಆಲೂರು - ತಾಲೂಕಿನ ಬೈರಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75ರ ಚೌಲಗೆರೆ ಬಳಿ ನಿರ್ಮಿಸಲಾಗಿರುವ, ಟೋಲ್  ಪ್ಲಾಜಾದಲ್ಲಿ ವಸೂಲು  ಮಾಡುತ್ತಿರುವ ಸುಂಕದಿಂದ ತಪ್ಪಿಸಿಕೊಳ್ಳಲು ಪ್ರತಿದಿನ ನೂರಾರು ವಾಹನಗಳು ಆಲೂರು ಪಟ್ಟಣದ ಮಾರ್ಗವಾಗಿ ಸಂಚರಿಸುತ್ತಿದ್ದು, ಇದರ ಪರಿಣಾಮವಾಗಿ ಪಟ್ಟಣದ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿ ಪಟ್ಟಣದ ನಾಗರೀಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

 ಇಲ್ಲಿರುವ  ಟೋಲ್ ಪ್ಲಾಜಾದಲ್ಲಿ ಸುಂಕದ ಹಣವನ್ನು ಉಳಿಸಲು ಕಾರು, ಲಾರಿ,ಸೇರಿದಂತೆ ಭಾರಿ ವಾಹನಗಳ ಚಾಲಕರು ಆಲೂರು ಕೊಡಿಗೆಯಿಂದ ಪಟ್ಟಣದ ಮುಖ್ಯರಸ್ತೆಯ ಮೂಲಕ ಬೈರಾಪುರ ಮಾರ್ಗವಾಗಿ ತಮ್ಮ ವಾಹನಗಳನ್ನು ಚಲಾಯಿಸುತ್ತಿರುವ ಪರಿಣಾಮ, ಪಟ್ಟಣದ ಮುಖ್ಯ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು ಭಾರಿ  ವಾಹನಗಳ ಸಂಚಾರದಿಂದಾಗಿ ಹಲವೆಡೆ ಕಾಂಕ್ರೀಟ್ ರಸ್ತೆ ಕುಸಿದು ಹೋಗಿದೆ. 

ಟೋಲ್ ನಲ್ಲಿನ ಸುಂಕದಿಂದ  ತಪ್ಪಿಸಲು ಕಳ್ಳ ದಾರಿಗಳನ್ನು  ಕಂಡುಕೊಳ್ಳುವ ಇಂತಹ ಚಾಲಕರಿಗೆ ಆಲೂರು ಮುಖ್ಯ ರಸ್ತೆಯ ಮೂಲಕ ರಾಜಮಾರ್ಗದಲ್ಲಿ ಓಡಾಡಲು ಬಿಟ್ಟಂತಾಗಿದೆ.

 ಟೋಲ್ ಪ್ಲಾಜಾ ಪ್ರಾರಂಭಿಸುವ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳು, ಹಾಗೂ ಸಾರ್ವಜನಿಕ ರಿಂದ  ತೀವ್ರ  ವಿರೋಧ ವ್ಯಕ್ತವಾಗಿ ಪ್ರತಿಭಟನೆ ನಡೆದ ಸಂದರ್ಭದಲ್ಲಿ, ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಲೋಕಸಭಾ ಸದಸ್ಯರು, ಜಿಲ್ಲಾಧಿಕಾರಿಗಳು, ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗಳು ಸಭೆ ನಡೆಸಿ ಹೋರಾಟಗಾರರ ಮನವೊಲಿಸಿ,ಈ ಟೋಲ್ ಪ್ಲಾಜಾ ದಿಂದ ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ,ಹಾಗೂ ಯಾವುದೇ ಕಾರಣಕ್ಕೂ ಆಲೂರು ಮುಖ್ಯ ರಸ್ತೆಯ ಮೂಲಕ ಹೆಚ್ಚುವರಿ ವಾಹನಗಳು ಉತ್ತರಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದ ಹಿನ್ನೆಲೆಯಲ್ಲಿ, ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ಹಾಗೂ ನಾಗರೀಕರು ಪ್ರತಿಭಟನೆಯಿಂದ ಹಿಂದೆ ಸರಿದಿದ್ದರು.

 


ಆದರೆ ಸಂಸದರು, ಹಾಗೂ ಅಧಿಕಾರಿಗಳು ನೀಡಿದ ಭರವಸೆ ಭರವಸೆಯಾಗಿ ಉಳಿದಿದ್ದು,ಇದರಿಂದಾಗಿ ಆಲೂರು ಪಟ್ಟಣದ ನಾಗರೀಕರು ಪರದಾಡುವಂತಾಗಿದೆ.

 ಪಟ್ಟಣದ ಮುಖ್ಯ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗುತ್ತಿದ್ದು, ಏನಾದರೂ ಅಪಘಾತ ಸಂಭವಿಸಿದರೆ ಯಾರೂ ಹೊಣೆಯಾಗುತ್ತಾರೆ, ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. 

ಲೋಕಸಭಾ ಸದಸ್ಯರು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಕವಡೆ ಕಾಸಿನ ಕಿಮ್ಮತ್ತು  ಇಲ್ಲದಂತಾಗಿದ್ದು,ಪುನಹ ಕನ್ನಡಪರ ಸಂಘಟನೆಗಳು ನಾಗರೀಕರೊಡಗೂಡಿ ಪ್ರತಿಭಟನೆ ಹಾದಿಹಿಡಿಯುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಇತ್ತ ಗಮನ ಹರಿಸಿ,ಸೂಕ್ತ ಕ್ರಮ   ಕೈಗೊಳ್ಳಬೇಕಿದೆ.

ಈ ಸಂಬಂಧವಾಗಿ ಪತ್ರಿಕೆಯೊಂದಿಗೆ ಮಾತನಾಡಿದ ಸಂಸದ ಶ್ರೇಯಸ್ ಪಟೇಲ್, ಇದು ನನ್ನ ಗಮನಕ್ಕೆ ಬಂದಿರಲಿಲ್ಲ, ಕಳೆದ ಮೂರು ತಿಂಗಳಗಳ ಹಿಂದೆ ನಡೆದ ಸಭೆಯಲ್ಲಿ ಟೋಲ್ ತಪ್ಪಿಸಲು, ಆಲೂರು ಮಾರ್ಗವಾಗಿ ಹೆಚ್ಚುವರಿ ವಾಹನಗಳು ಸಂಚರಿಸಿದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು. ಆದರೆ ಈವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂಬುದು ಈಗ ನನ್ನ ಗಮನಕ್ಕೆ ಬಂದಿದೆ. ಶೀಘ್ರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೆತಾ ಮಾತನಾಡಿ ತಕ್ಷಣವೇ  ಡಿವೈಎಸ್ಪಿ ಅವರಿಗೆ ಈ ಸಂಬಂಧವಾಗಿ ಗಮನ ಹರಿಸಲು ಸೂಚಿಸಲಾಗುವುದು, ಇನ್ನೆರಡು ದಿನದೊಳಗೆ ಈ ಸಮಸ್ಯೆ ಪರಿಹರಿಸಿ ನಾಗರೀಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲಾಗುವುದೆಂದು ತಿಳಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್ ಮಾತನಾಡಿ,ಈ ಹಿಂದೆ ಟೋಲ್ ಸಂಬಂಧವಾಗಿ ಪ್ರತಿಭಟನೆ ನಡೆದ ಸಂದರ್ಭದಲ್ಲಿ ಸಂಸದರು ಹಾಗೂ ಅಧಿಕಾರಿಗಳು ಸ್ಥಳೀಯರಿಗೆ, ಹಾಗೂ ಆಲೂರು ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎರಡು ದಿನದೊಳಗೆ ಈ ಸಮಸ್ಯೆಗೆ ಪರಿಹಾರ ಕಲ್ಪಿಸದೆ ಹೋದರೆ  ಸಾರ್ವಜನಿಕರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಒಡಗೂಡಿ, ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಈ ಟೋಲ್ ಪ್ಲಾಜಾವನ್ನು ಮುಚ್ಚಿಸಲು ಮುಂದಾಗ ಬೇಕಾಗುತ್ತದೆ ಎಂದು ಎಚ್ಚರಿಸಿದರು.

Post a Comment

0 Comments