ಕಲಾಭವನ ನಿರ್ವಹಣೆ ಅಚ್ಚುಕಟ್ಟಾಗಿ ನಿರ್ವಹಿಸಲು ಸೂಚನೆ

ಹಾಸನ : ನಗರದಲ್ಲಿರುವ ಕಲಾಭವನವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವುದರ ಮೂಲಕ ಕಲಾಸಕ್ತರ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಲು ಅಪರ ಜಿಲ್ಲಾಧಿಕಾರಿ ಮಂಜುನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.


ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಹಾಸನಾಂಬ ಕಲಾಭವನ ನಿರ್ವಹಣೆ ಮತ್ತು ಸಲಹಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಸ್ವಚ್ಚತೆ ಕಾಪಾಡಲು ಕಸದ ಬುಟ್ಟಿಗಳನ್ನು ಇಡುವಂತೆ ಸೂಚಿಸಿದರಲ್ಲದೆ, ಪ್ಲಾಸ್ಟಿಕ್ ಬಳಕೆ ನಿಷೇಧಿಸಿ, ವಾಹನಗಳ ಕ್ರಮಬದ್ಧ ನಿಲುಗಡೆಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಲಾಭವನದ ಹೊರ ಆವರಣಕ್ಕೆ ಬಾಡಿಗೆ ನಿಗದಿಪಡಿಸಲು ಲೋಕೋಪಯೋಗಿ ಇಲಾಖೆಯಿಂದ ದರಪಟ್ಟಿ ಪಡೆಯುವಂತೆ ತಿಳಿಸಿದರು.

ಕಲಾಭವನದ ಒಳಗೆ ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಹೊರ ಆವರಣದಲ್ಲಿ ಧ್ವನಿ ವರ್ಧಕ ಅಳವಡಿಸದಂತೆ ಕ್ರಮವಹಿಸುವಂತೆ ತಿಳಿಸಿದರಲ್ಲದೆ, ಅನುಪಯುಕ್ತ ವಸ್ತುಗಳ ವಿಲೇವಾರಿಗೆ ಕ್ರಮವಹಿಸಲು ತಿಳಿಸಿದರು.

ಸಾರ್ವಜನಿಕರು ತಮ್ಮ ಅನಿಸಿಕೆಗಳನ್ನು ಬರೆಯಲು ಒಂದು ರಿಜಿಸ್ಟರ್ ಇಡುವಂತೆ ಸೂಚಿಸಿದರಲ್ಲದೆ, ಅನಿಸಿಕೆಗಳನ್ನು ಆಧಾರಿಸಿ ಕೆಲವು ಮಾರ್ಪಾಡುಗಳನ್ನು ಮಾಡಲು ಸಹಾಯವಾಗುತ್ತದೆ ಎಂದರಲ್ಲದೆ, ಕಲೆ ಬಗ್ಗೆ ಹೆಚ್ಚಿನ ಆಸಕ್ತಿವಹಿಸಿ ನಗರದ ಕಲಾಭವನಕ್ಕೆ ಅಗತ್ಯವಿರುವ ಸೌಲಭ್ಯ ಒದಗಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. 

ಕಲಾಭವನದ ಬಾಡಿಗೆ ಪರಿಷ್ಕರಣೆಗೆ ಶೇ.10 ರಷ್ಟು ಹೆಚ್ಚಳ ಮಾಡಲು ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಾಬು, ಜಿಲ್ಲಾಧಿಕಾರಿ ಕಚೇರಿ ಸಹಾಯಕರಾದ ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ತಾರಾನಾಥ್, ಕಲಾವಿದರಾದ ಗ್ಯಾರಂಟಿ ರಾಮಣ್ಣ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

Post a Comment

0 Comments