ಹಾಸನ: ರಾಜ್ಯದ ಕಬ್ಬು ಬೆಲೆ ನಿಗದಿ ಮತ್ತು ಸರ್ಕಾರದ ನೀತಿಗಳಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಆರೋಪಿಸಿದ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರದಾನ ಕಾರ್ಯದರ್ಶಿ ಎನ್.ಎಲ್. ಭರತ್ ರಾಜ್ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನೀತಿಗಳನ್ನು ತೀವ್ರವಾಗಿ ಟೀಕಿಸಿದರು. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಜಿಲ್ಲೆಗಳ ನಡುವೆ ಕಬ್ಬಿನ ಬೆಲೆ ನಿಗದಿಯಲ್ಲಿ ಅನ್ಯಾಯವಾಗಿ ವ್ಯತ್ಯಾಸ ಮಾಡಲಾಗುತ್ತಿದ್ದು, ದಕ್ಷಿಣ ಭಾಗದ ರೈತರಿಗೆ ಟನ್‌ಗೆ ಕನಿಷ್ಠ ಸಾವಿರ ರೂ. ನಷ್ಟವಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಟಾವು ಮತ್ತು ಸಾಗಣಿಕೆ ವೆಚ್ಚ ಕಡಿತ ಮಾಡಿದರೆ ಪ್ರತಿ ಟನ್‌ಗೆ ₹3200 ಮತ್ತು ವೆಚ್ಚ ಸೇರಿದಂತೆ ₹4000 ಏಕರೂಪ ಬೆಲೆ ರಾಜ್ಯದಾದ್ಯಂತ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು. ಯಾವುದೇ ರಿಕವರಿ ಮಾನದಂಡ ಇಲ್ಲದೆ ಎಲ್ಲರಿಗೂ ಒಂದೇ ದರ ನಿಗದಿ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ಕೆಲವು ಸಕ್ಕರೆ ಕಾರ್ಖಾನೆಗಳು ಸರ್ಕಾರದ ದರ ನಿಗದಿಯನ್ನು ಪಾಲಿಸದೇ ರೈತರನ್ನು ತಪ್ಪಿಸುವ ಕ್ರಮಗಳನ್ನು ಕೈಗೊಂಡಿರುವುದನ್ನು ಅವರು ಖಂಡಿಸಿ, ಇಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದೂ ಒತ್ತಾಯಿಸಿದರು.
ಕೇಂದ್ರ ಸರ್ಕಾರದ ಎಫ್‌ಆರ್‌ಪಿ ನಿಗದಿಯಲ್ಲಿ ಸಕ್ಕರೆ ಇಳುವರಿ ಪ್ರಮಾಣವನ್ನು ಕಡಿಮೆ ಪರಿಗಣಿಸುವ ಮೂಲಕ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು. ತಜ್ಞರ ಅಭಿಪ್ರಾಯದಂತೆ ಒಂದು ಟನ್ ಕಬ್ಬಿನಿಂದ 14 ರಿಂದ 15 ಸಾವಿರ ರೂ. ಆದಾಯ ಬರುತ್ತದೆ ಎಂಬುದನ್ನು ಉಲ್ಲೇಖಿಸಿ, ಕನಿಷ್ಠ 9.50 ಶೇಕಡಾ ಸಕ್ಕರೆ ಇಳುವರಿ ಆಧಾರದ ಮೇಲೆ ಟನ್‌ಗೆ ₹5500 ಎಫ್‌ಆರ್‌ಪಿ ಘೋಷಿಸಬೇಕೆಂದರು. ಸಕ್ಕರೆ ರಫ್ತು ಹಾಗೂ ಎಥನಾಲ್ ಬಳಕೆಯ ಪ್ರಮಾಣವನ್ನು ಹೆಚ್ಚಿಸುವ ಮೂಲಕ ದೇಶದ ಸಕ್ಕರೆ ವಲಯ ಬಲಪಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಹರಿಯಾಣ, ಪಂಜಾಬ್, ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ಕಬ್ಬಿನ ದರ ಸಾವಿರಾರು ರೂಪಾಯಿಗಳ ಮಟ್ಟ ತಲುಪಿದರೆ, ಕರ್ನಾಟಕದಲ್ಲಿ ಮಾತ್ರ ಬೆಲೆ ಕಡಿಮೆ ಇರುವುದು ರೈತರಿಗೆ ಭಾರೀ ಹೊರೆ ತಂದಿದೆ ಎಂದು ಅವರು ವಿಷಾದಿಸಿದರು. ರೈತರಿಗೆ ಕೊಡಬೇಕಾದ ಟನ್‌ಗೆ ₹2150 ಬಾಕಿಯನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ 2023–24–25 ಸಾಲಿನ ಎಸ್ಎಪಿಯನ್ನು ತ್ವರಿತವಾಗಿ ಘೋಷಿಸಿ ರೈತರ ಖಾತೆಗೆ ಹಣ ಜಮಾ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯದಾದ್ಯಂತ ಕಟಾವು ಮತ್ತು ಸಾಗಣಿಕೆ ವೆಚ್ಚ 900 ರಿಂದ 1300 ರೂ.ವರೆಗೆ ಬರುತ್ತದೆ. ಈ ವೆಚ್ಚವನ್ನು ಸಂಪೂರ್ಣವಾಗಿ ಕಾರ್ಖಾನೆಗಳೇ ಭರಿಸಿ, ದಕ್ಷಿಣ ಕರ್ನಾಟಕದ ರೈತರಿಗೆ ಬೆಳಗಾಂನ ದರಕ್ಕೆ ಸಮಾನವಾಗಿ ಕನಿಷ್ಠ ₹1100 ಹೆಚ್ಚುವರಿ ಹಣ ನೀಡಬೇಕು ಎಂದು ಸಂಘದ ನಾಯಕರು ಹೇಳಿದರು. ಕೃಷಿ ಬೆಲೆ ಆಯೋಗದ ವರದಿ ಪ್ರಕಾರ ಒಂದು ಟನ್ ಕಬ್ಬು ಬೆಳೆಗೇ 3580 ರೂ. ವೆಚ್ಚ ಬರುತ್ತದೆ. ಡಾ. ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ವೆಚ್ಚದ 50 ಶೇಕಡಾ ಲಾಭ ಸೇರಿಸಿ ಟನ್‌ಗೆ ₹5500 ಬೆಲೆ ನಿಗದಿ ಮಾಡುವುದು ನ್ಯಾಯಸಮ್ಮತ ಎಂದು ಅವರು ತಿಳಿಸಿದ್ದಾರೆ.
ಕಬ್ಬಿನ ಸಕ್ಕರೆ ಇಳುವರಿಯಲ್ಲಿ ಅನ್ಯಾಯ ನಡೆಯುತ್ತಿರುವುದರಿಂದ, ಸರ್ಕಾರವೇ ಮುಕ್ತ ಪರೀಕ್ಷಾ ಲ್ಯಾಬ್‌ಗಳನ್ನು ಸ್ಥಾಪಿಸಬೇಕು ಎಂದು ಅವರು ಬೇಡಿಕೆ ಇಟ್ಟರು. ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು, ತಜ್ಞರು ಮತ್ತು ಕಬ್ಬು ಬೆಳೆಗಾರರ ಪ್ರತಿನಿಧಿಗಳ ಸಮಿತಿ ರಚಿಸಿ 15 ದಿನಕ್ಕೊಮ್ಮೆ ಇಳುವರಿ ಪರೀಕ್ಷೆ ನಡೆಸಿ ಸರಾಸರಿ ಘೋಷಣೆ ಮಾಡಬೇಕೆಂದು ಸಲಹೆ ನೀಡಿದರು. ಕಬ್ಬಿನ ಉಪಉತ್ಪನ್ನಗಳಾದ ಮೊಲಾಸಸ್, ಕಾಕಂಬಿ, ಬಗಾಸ್, ಕೋಜಿನ್ ಹಾಗೂ ಡಿಸ್ಟಿಲರಿಗಳ ಲಾಭಾಂಶದಲ್ಲಿ ಕನಿಷ್ಠ 50 ಶೇಕಡಾ ಪಾಲು ರೈತರಿಗೆ ನೀಡುವುದೂ ಅಗತ್ಯ ಎಂದು ಅವರು ಹೇಳಿದರು.
ರೈತ ವಿರೋಧಿ ರಂಗರಾಜನ್ ಸಮಿತಿ ಶಿಫಾರಸ್ಸಿನ ಆಧಾರದ ಮೇಲೆ ಜಾರಿಗೆ ತಂದಿರುವ 2013ರ ಕಬ್ಬು ಖರೀದಿ–ಪೂರೈಕೆ ನಿಯಂತ್ರಣ ಕಾಯ್ದೆಯನ್ನು ರದ್ದುಗೊಳಿಸಿ, 2013ರ ಮೊದಲು ಜಾರಿಯಲ್ಲಿದ್ದ ರಾಜ್ಯ ಸಲಹಾ ಬೆಲೆ (SAP) ವ್ಯವಸ್ಥೆಯನ್ನು ಮರುಸ್ಥಾಪಿಸಬೇಕು ಎಂದು ಸಂಘದ ನಾಯಕರು ಆಗ್ರಹಿಸಿದರು. ಹೊಸ ಕಬ್ಬು ಬೆಳೆಗಾರರಿಗೆ ಪ್ರೋತ್ಸಾಹಧನವಾಗಿ ಎಕರೆಗೆ ₹10,000 ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಯಿತು.
ಸುದ್ದಿಗೋಷ್ಠಿಯಲ್ಲಿ ಹೆಚ್.ಆರ್. ನವೀನ್ ಕುಮಾರ್, ಹೆಚ್.ಎಸ್. ಮಂಜುನಾಥ್ ಹಾಗೂ ವಾಸುದೇವ ಕಲ್ಕೆರೆ ಉಪಸ್ಥಿತರಿದ್ದರು.


0 Comments