ಸಿದ್ದರಾಮಯ್ಯ ದೇಶದ 3ನೇ ಶ್ರೀಮಂತ ಮುಖ್ಯಮಂತ್ರಿ

ಹೊಸದಿಲ್ಲಿ: ದೇಶದ ಅತಿ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಮೂರನೇ ಸ್ಥಾನದಲ್ಲಿದ್ದಾರೆ. ಅಸೋಸಿಯೇಷನ್‌ ಆಫ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ಮತ್ತು ನ್ಯಾಷನಲ್‌ ಎಲೆಕ್ಷನ್‌ ವಾಚ್‌ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾಗಿದೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಿರಿವಂತ ಸಿಎಂಗಳ ಸಾಲಿನಲ್ಲಿ ಮೊದಲ ಹಾಗೂ ಅರುಣಾಚಲ ಪ್ರದೇಶದ ಪೆಮಾ ಖಂಡು ಎರಡನೇ ಸ್ಥಾನದಲ್ಲಿದ್ದಾರೆ.



ಚಂದ್ರಬಾಬು ನಾಯ್ಡು 931 ಕೋಟಿ ರೂ. ಹಾಗೂ ಪೆಮಾ ಖಂಡು 332 ಕೋಟಿ ಸಂಪತ್ತು ಹೊಂದಿದ್ದಾರೆ. 3ನೇ ಸ್ಥಾನದಲ್ಲಿರುವ ಸಿದ್ದರಾಮಯ್ಯ ಬಳಿ 51 ಕೋಟಿ ಮೌಲ್ಯದ ಆಸ್ತಿಯಿದೆ ಎಂದು ಈ ಸಮೀಕ್ಷಾ ವರದಿ ತಿಳಿಸಿದೆ. ಇದು ಮುಖ್ಯಮಂತ್ರಿಗಳ ಘೋಷಿತ ಆಸ್ತಿಗಳ ಲೆಕ್ಕ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಮುಖ್ಯಮಂತ್ರಿಗಳಲ್ಲಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರೇ ಬಹಳ ಬಡವರು. ಅವರು ಹೊಂದಿರುವುದು ಬರೀ 15 ಲ.ರೂ. ಮೌಲ್ಯದ ಸಂಪತ್ತು. ಜಮ್ಮು-ಕಾಶ್ಮೀರದ ಸಿಎಂ ಓಮರ್‌ ಅಬ್ದುಲ್ಲಾ (55 ಲಕ್ಷ), ಕೇರಳದ ಸಿಎಂ ಪಿಣರಾಯಿ ವಿಜಯನ್‌ 1.18 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದು, ದೇಶದಲ್ಲೇ ಅತಿ ಕಡಿಮೆ ಆಸ್ತಿ ಹೊಂದಿರುವ ಸಿಎಂಗಳ ಸಾಲಿನಲ್ಲಿದ್ದಾರೆ.

ಸಿದ್ದರಾಮಯ್ಯ ಅವರು 23 ಕೋಟಿ ಸಾಲ ಹೊಂದಿದ್ದಾರೆ. ಪೆಮಾ ಖಂಡು 180 ಕೋಟಿ ಹಾಗೂ ನಾಯ್ಡು 10 ಕೋಟಿ ಸಾಲ ಹೊಂದಿದ್ದಾರೆ. ದೇಶದ 31 ಮುಖ್ಯಮಂತ್ರಿಗಳ ಒಟ್ಟು ಆಸ್ತಿ 1,630 ಕೋಟಿ ರೂ. ಎಂದು ಸಂಸ್ಥೆ ವರದಿ ತಿಳಿಸಿದೆ.

Post a Comment

0 Comments