ಅರಸೀಕೆರೆ : ಬೆಲೆ ಕಟ್ಟಲಾಗದ ವಸ್ತುವೊಂದು ಭೂಮಿಯ ಮೇಲಿದ್ದರೆ ಅದು ಒಳ್ಳೆಯತನ ಮಾತ್ರ. ಜನ ಮೆಚ್ಚುವಂತೆ ಬದುಕುವುದಕ್ಕಿಂತ ಮನ ಮೆಚ್ಚುವಂತೆ ಜೀವನ ನಡೆಸುವುದೇ ಶ್ರೇಷ್ಠ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ಶ್ರೀ ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ನಗರದ ವೀರಶೈವ ಸಮುದಾಯ ಭವನದಲ್ಲಿ ಸೊಮವಾರ ಹಮ್ಮಿಕೊಂಡಿದ್ದ ಇಷ್ಟಲಿಂಗಪೂಜೆ ಹಾಗೂ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಾವು ಉಳಿಸಿಟ್ಟು ಹೋಗುವ ಮತ್ತು ಬೆಲೆ ಕಟ್ಟಲಾಗದ ಆಸ್ತಿಯೆಂದರೆ ಒಳ್ಳೆಯತನ ಅಗಿದೆ. ಜೀವನದಲ್ಲಿ ಉನ್ನತಿ ಸಾಧಿಸಬೇಕಾದರೆ ಜನಬಲ, ಹಣಬಲ, ತೋಳ್ಬಲ ಇದ್ದರೆ ಸಾಲದು. ಅದರೊಂದಿಗೆ ದೈವ ಬಲವೂ ಮುಖ್ಯ. ದುರ್ಯೋಧನನಿಗೆ ಎಲ್ಲವೂ ಇತ್ತು. ಆದರೆ ದೈವ ಬಲ ಇರಲಿಲ್ಲ. ಪ್ರತಿಭೆ ಮತ್ತು ರೂಪ ದೇವರು ಕೊಟ್ಟ ಕೊಡುಗೆ. ಕೀರ್ತಿ ಮತ್ತು ಹಣ ಮನುಷ್ಯ ತನ್ನ ಸಾಮರ್ಥ್ಯದಿಂದ ಸಂಪಾದಿಸುತ್ತಾನೆ. ಯಾರ ಹೃದಯದಲ್ಲಿ ಕರುಣೆ ಸ್ನೇಹ ಮತ್ತು ಗೌರವ ಭಾವನೆಗಳಿವೆಯೋ ಅವರೇ ಎಲ್ಲರಿಗಿಂತ ದೊಡ್ಡವ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಜೀವನ ದರ್ಶನ ಸಂದೇಶದಲ್ಲಿ ಬೋಧಿಸಿದ್ದಾರೆ ಎಂದರು.
ಧರ್ಮಾಸಕ್ತಿಯನ್ನು ಬೆಳೆಸಿಕೊಳ್ಳಬೇಕಾಗಿದೆ: ಮನುಷ್ಯ ಜೀವನದಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸಿಕೊಳ್ಳದಿದ್ದರೆ ಬದುಕು ಬಲಹೀನಗೊಳ್ಳುತ್ತದೆ. ಸಂಪತ್ತು ಮತ್ತು ಬಯಕೆ ಬಯಸುವ ಮನುಷ್ಯ ಮೊದಲಿಗೆ ಧರ್ಮಾಸಕ್ತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಸುಖದ ಮೂಲ ಧರ್ಮಾಚರಣೆಯಲ್ಲಿದೆ ಎಂದು ಋಷಿ ಮುನಿಗಳೇ ಹೇಳಿದ್ದಾರೆ. ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಅತ್ಯಮೂಲ್ಯವಾದ ಧರ್ಮದ ದಶವಿಧ ಸೂತ್ರಗಳನ್ನು ಬೋಧಿಸಿ ಸಕಲರನ್ನೂ ಉದ್ಧರಿಸಿದ್ದಾರೆ ಎಂದರು.
ಬಸವ ಕಲ್ಯಾಣದಲ್ಲಿ 34ನೇ ದಸರಾ ದರ್ಬಾರ್:
10 ವರ್ಷದ ಹಿಂದೆ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ 23ನೇ ವರ್ಷದ ದಸರಾ ದರ್ಬಾರ್ ಆಚರಣೆಗೆ ನೆರವು ನೀಡಿದ ಸದ್ಭಕ್ತರನ್ನು ಸದಾ ಸ್ಮರಿಸಿಕೊಳ್ಳುತ್ತೇವೆ. ಬೀದರ್‌ನ ಬಸವ ಕಲ್ಯಾಣದಲ್ಲಿ 34ನೇ ದಸರಾ ದರ್ಬಾರ್ ಮಹೋತ್ಸವ ಹಮ್ಮಿಕೊಳ್ಳಲು ಸಿದ್ಧತೆ ಭರದಿಂದ ನಡೆಯುತ್ತಿದೆ ಎಂದು ಹೇಳಿದರು.
ಡಿ. 15ರಂದು ಜರುಗಲಿರುವ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಲಿಂ.ಶ್ರೀಮದ್ ರಂಭಾಪುರಿ ಜಗದ್ಗುರು ವೀರರುದ್ರ ಮುನಿದೇವ ಶಿವಾಚಾರ್ಯ ಭಗವತ್ಪಾದರ ಜನ್ಮ ಶತಮಾನೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಶ್ರೀ ರಂಭಾಪುರಿ ಜಗದ್ಗುರುಗಳು, ಸಮಾರಂಭದಲ್ಲಿ ಸರ್ವರೂ ಪಾಲ್ಗೊಳ್ಳಬೇಕೆಂದರು.
ಪೀಠಾಧೀಶರ ಉಪಸ್ಥಿತಿ: ನೊಣವಿನಕೆರೆ ಕಾಡಸಿದ್ದೇಶ್ವರ ಮಹಾಸಂಸ್ಥಾನದ ಡಾ.ಕರಿವೃಷಭ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿ, ಜ್ಞಾನ ಮಾರ್ಗದ ಮೂಲಕ ಅಜ್ಞಾನದ ಕತ್ತಲೆ ಕಳೆಯಬೇಕು. ಧಾರ್ಮಿಕ ಸಮಾರಂಭಗಳಲ್ಲಿ ಶಾಂತಿ, ಸಂಯಮ ಹಾಗೂ ಉತ್ಸಾಹ ತೋರಬೇಕು ಎಂದು ಹೇಳಿದರು. ದೊಡ್ಡಗುಣಿ ಹಿರೇಮಠದ ಶ್ರೀರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬೆಳಗುವ ದೀಪ ಶ್ರೀಮಂತ, ಬಡವ ಎಂಬ ಭೇದವಿಲ್ಲದೆ ಎಲ್ಲೆಡೆ ಸಮಾನ ಬೆಳಕನ್ನು ಕೊಡುವಂತೆ ಶ್ರೀ ಗುರು ಎಲ್ಲರನ್ನು ಉದ್ಧರಿಸುವ ಶಕ್ತಿ ಹೊಂದಿದ್ದಾರೆ. ಅರಿವು, ಆದರ್ಶಗಳು ಗುರುವಿನಿಂದ ಪ್ರಾಪ್ತವಾಗುತ್ತವೆ ಎಂದರು. ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದುಡಿಯುವ ಮನುಷ್ಯನಿಗೆ ಕಾಯಕದ ಬೆಲೆ, ದುಡಿಯುವ ರೈತನಿಗೆ ಮಣ್ಣಿನ ಬೆಲೆ, ಬಡವನಿಗೆ ದುಡ್ಡಿನ ಬೆಲೆ ಗೊತ್ತಿರುತ್ತದೆ. ಈ ಮೂರು ಬಲ್ಲವನಿಗೆ ಜೀವನ ಏನು ಅನ್ನುವುದು ಗೊತ್ತಾಗುತ್ತದೆ ಎಂದರು.
ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ, ಹೊನ್ನವಳ್ಳಿ ಶ್ರೀಶಿವಪ್ರಕಾಶ ಸ್ವಾಮೀಜಿ, ಮಾಜಿ ಶಾಸಕರಾದ ಕೆ.ಪಿ.ಪ್ರಭುಕುಮಾರ್, ಜಿ.ಎಸ್.ಪರಮೇಶ್ವರಪ್ಪ, ಉದ್ಯಮಿ ಕೆ.ವಿ.ನಿರ್ವಾಣಸ್ವಾಮಿ ಮಾತನಾಡಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಎಸ್.ಅರುಣ್ ಕುಮಾರ್, ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ, ಉಪಾಧ್ಯಕ್ಷ ಮನೋಹರ್, ಸದಸ್ಯ ರಾಜಶೇಖರ್, ಇಷ್ಟಲಿಂಗ ಪ್ರಜಾ ಸಮಿತಿ ಅಧ್ಯಕ್ಷ ಸಿ.ಜೆ.ರಾಜು, ಮುರುಗೇಂದ್ರಪ್ಪ, ಮುರುಂಡಿ ಶಿವಯ್ಯ, ಕೆ.ಪಿ.ಚಂದ್ರಶೇಖರ್, ಕೊಟ್ರಯ್ಯ, ಹರಳಕಟ್ಟ ಶಂಕರಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ಹಾಸನ ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಇತರರಿದ್ದರು. ಮುಖಂಡರಾದ ಕೆ.ಎಸ್.ಲೋಕೇಶಕುಮಾರ್, ಸಿದ್ಧೇಶಶಾಸ್ತ್ರಿಗಳು, ಮಹೇಶ್ವರಯ್ಯ , ನಾಗಭೂಷಣಸ್ವಾಮಿ ಇತರರಿದ್ದರು. ಲೋಕಕಲ್ಯಾಣಾರ್ಥವಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಸಿ ಶುಭ ಹಾರೈಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.


0 Comments