ಹಾಸನದಲ್ಲಿ ನಾಳೆ ಜನಕಲ್ಯಾಣ ಸಮಾವೇಶ

 ಹಾಸನ: ಕೆಪಿಸಿಸಿ ಹಾಗೂ ಸ್ವಾಭಿಮಾನಿ ಸಂಘಟನೆಗಳ ಆಶ್ರಯದಲ್ಲಿ ನಗರದ ಎಸ್‌.ಎಂ. ಕೃಷ್ಣ ಬಡಾವಣೆಯಲ್ಲಿ ಜನಕಲ್ಯಾಣ ಸಮಾವೇಶವನ್ನು ಡಿ.5ರಂದು ಆಯೋಜಿಸಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಸಂಪುಟದ ಸದಸ್ಯರು, ಮುಖಂಡರು ಭಾಗವಹಿಸಲಿದ್ದಾರೆ.  ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿಯೇ ಈ ಸಮಾವೇಶ ನಡೆಯಲಿದ್ದು, ಸುಮಾರು 1 ಲಕ್ಷ ಜನ ಸೇರುವ ನಿರೀಕ್ಷೆ ಇದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಿಂದ ಜನಕಲ್ಯಾಣಕ್ಕಾಗಿ ಆರಂಭಿಸಿರುವ ಯೋಜನೆಗಳ ಕುರಿತು ಜನರಿಗೆ ಮನವರಿಕೆ ಮಾಡಲು ಹಾಗೂ ಜನರಿಂದ ಸಲಹೆಗಳನ್ನು ಸ್ವೀಕರಿಸಲು ಸಮಾವೇಶ ಆಯೋಜಿಸಲಾಗುತ್ತಿದೆ’ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

70 ಸಾವಿರ ಮಂದಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಮೂರು ವೇದಿಕೆಗಳನ್ನು ನಿರ್ಮಿಸಲಾಗಿದೆ. ಸುಮಾರು 2 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ನಗರದಾದ್ಯಂತ ಫ್ಲೆಕ್ಸ್‌, ಬಂಟಿಂಗ್‌ಗಳು ರಾರಾಜಿಸುತ್ತಿವೆ.

ಮುಖಂಡರಲ್ಲೇ ಗೊಂದಲ: ಆರಂಭದಲ್ಲಿ ‘ಹಳೆಯ ಮೈಸೂರು ಭಾಗದ ಎಲ್ಲ ಜಿಲ್ಲೆಗಳಿಂದ ಸುಮಾರು 2 ಲಕ್ಷ ಜನರನ್ನು ಸೇರಿಸಿ ಸ್ವಾಭಿಮಾನಿ ಸಮಾವೇಶ ನಡೆಸಲಾಗುವುದು’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹೇಳಿದ್ದರು.

ಆದರೆ, ನಗರಕ್ಕೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‘ಸಮಾವೇಶ ಹಾಸನ ಜಿಲ್ಲೆಗಷ್ಟೇ ಸೀಮಿತವಾಗಿದ್ದು, ಅಕ್ಕಪಕ್ಕದ ಜಿಲ್ಲೆಗಳಿಂದ ಜನ ಬರಬಹುದು’ ಎಂದು ತಿಳಿಸಿದ್ದರು. ‘ನೆರೆಯ ತುಮಕೂರು, ಮೈಸೂರು, ಮಂಡ್ಯ ಸೇರಿದಂತೆ ಇತರ ಜಿಲ್ಲೆಗಳಿಂದಲೂ ಜನ ಬರುವ ನಿರೀಕ್ಷೆ ಇದೆ’ ಎಂದು ಸಚಿವ ಕೆ.ಎನ್‌. ರಾಜಣ್ಣ ತಿಳಿಸಿದ್ದಾರೆ.

‘ಇದು ಹಳೆಯ ಮೈಸೂರು ಭಾಗದ ಸಮಾವೇಶವೋ, ಹಾಸನ ಜಿಲ್ಲೆಯ ಸಮಾವೇಶವೋ ಎನ್ನುವ ಗೊಂದಲ ಬಹುತೇಕರಲ್ಲಿದೆ’ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ.

Post a Comment

0 Comments