ಹಾಸನ : ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಪ್ರಥಮ ದರ್ಜೆ ಸಹಾಯಕ ಬಿ.ಹೆಚ್.ಮಂಜುನಾಥ ಇವರ ವಿರುದ್ದ ಅಸ್ಪೃಶ್ಯತೆ ದೌರ್ಜನ್ಯ ತಡೆ ಕಾಯಿದೆ ಅನ್ವಯ ದೂರು ದಾಖಲಾಗಿರುವುದರಿಂದ ಇವರನ್ನು ಬಂಧಿಸುವಂತೆ ಹಾಗೂ ಸೇವೆಯಿಂದ ಅಮಾನತ್ತು ಮಾಡಬೇಕೆಂಬುದು ನಮ ಒತ್ತಾಯವಾಗಿದೆ ಎಂದು ದಲಿತ ಜನಪರ ಚಳವಳಿಗಳ ಒಕ್ಕೂಟದ ಧರ್ಮೇಶ್ ಮತ್ತು ಹೆಚ್. ಕೆ. ಸಂದೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಅರಕಲಗೂಡಿನ ಎಂ.ಪಿ.ರಂಗಸ್ವಾಮಿಯವರು ಎಂ.ಎಂ.ಆರ್. ವಿದ್ಯಾ ಸಂಸ್ಥೆಯ ಸಂಸ್ಥೆಯ ಕಾರ್ಯದರ್ಶಿಯಾಗಿದ್ದು ಇವರು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿರುತ್ತಾರೆ. ಈ ವಿದ್ಯಾ ಸಂಸ್ಥೆಯ ಅಡಿಯಲ್ಲಿ ನ್ಯಾಷನಲ್ ಹೆರೊಡೆಟಸ್ ಆಂಗ್ಲ ಮಾಧ್ಯಮ ಶಾಲೆಯನ್ನು ೨೦೧೪ ರಲ್ಲಿ ಅರಕಲಗೂಡು ಪಟ್ಟಣದಲ್ಲಿ ಸ್ಥಾಪಿಸಿದ್ದು ಇದು ಇದುವರೆವಿಗೂ ನಡೆಯುತ್ತಿದೆ. ಈ ಶಾಲೆಯ ಮಾನ್ಯತೆ ನವೀಕರಣಕ್ಕೆ ಹಾಗೂ ಆರ್.ಟಿ.ಇ. ಅನುದಾನ ಬಿಡುಗಡೆ ಮಾಡುವ ಸಂಬಂಧವಾಗಿ ಜನವರಿ ೯ ರಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಛೇರಿಯ ಪ್ರಥಮ ದರ್ಜೆ ಸಹಾಯಕರಾದ ಬಿ.ಹೆಚ್. ಮಂಜುನಾಥ ಅವರನ್ನು ಭೇಟಿ ಮಾಡಿ ವಿಚಾರಿಸಿದಾಗ ಬಿ.ಹೆಚ್. ಮಂಜುನಾಥರವರು ಎಂ.ಪಿ, ರಂಗಸ್ವಾಮಿಯವರನ್ನು ಜಾತಿ ಹೆಸರಿಡಿದು ನಿಂದಿಸಿ, ಹೆದರಿಸಿ ಕೊಲೆ ಬೆದರಿಕೆ ಹಾಕಿ ಜೀವ ಭಯವನ್ನು ಹುಟ್ಟಿಸಿರುತ್ತಾರೆ ಎಂದರು. ಬಿ.ಎಚ್. ಮಂಜುನಾಥರವರಿಂದ ದೌರ್ಜನ್ಯಕ್ಕೆ ಒಳಗಾಗಿರುವ ಎಂ.ಪಿ. ರಂಗಸ್ವಾಮಿಯವರು ಹಾಸನ ನಗರ ಠಾಣೆಯಲ್ಲಿ ಅಸ್ಪೃಶ್ಯತೆ ದೌರ್ಜನ್ಯ ತಡೆ ಕಾಯಿದೆ ಪ್ರಕಾರ ದೂರು ದಾಖಲಿಸಿದ್ದು ಬಿ.ಎಚ್. ಮಂಜುನಾಥರವರ ಮೇಲೆ ಎಫ್.ಐ.ಆರ್. ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಕೂಡಲೇ ಬಂಧಿಸಬೇಕೆಂದು ಪೋಲೀಸು ಇಲಾಖೆಯನ್ನು ಆಗ್ರಹಿಸುತ್ತೇವೆ. ಹಾಗೂ ಅಸ್ಪೃಷ್ಯತೆ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಕಾರಣ ಬಿ.ಎಚ್. ಮಂಜುನಾಥ ಅವರನ್ನು ಸೇವೆಯಿಂದ ಕೂಡಲೇ ಅಮಾನತ್ತು ಮಾಡುವಂತೆ ಜಿಲ್ಲಾಡಳಿತ ಹಾಗೂ ಸರ್ಕಾರವನ್ನು ಹಾಸನ ಜಿಲ್ಲಾ ದಲಿತ ಮತ್ತು ಜನಪರ ಚಳುವಳಿಗಳ ಒಕ್ಕೂಟವು ಆಗ್ರಹಿಸುತ್ತದೆ ಎಂದು ಹೇಳಿದರು.



0 Comments