ಮೈಸೂರು: ಪ್ರತಿಯೊಬ್ಬರೂ ಕನ್ನಡ ಉಳಿಸಿ ಬೆಳೆಸುವುದರೊಂದಿಗೆ ಕಡ್ಡಾಯವಾಗಿ ಕನ್ನಡ ಬಳಸುವಂತಾಗಬೇಕು ಎಂದು ಸಾಹಿತಿ ಹಿರೇಮಗಳೂರು ಕಣ್ಣನ್ ಹೇಳಿದರು.
ರೋಟರಾಕ್ಟ್ ಕ್ಲಬ್ ಮೈಸೂರು ಈಸ್ಟ್ ವತಿಯಿಂದ ಕಿರು ರಂಗಮಂದಿರದಲ್ಲಿ ಏರ್ಪಡಿಸಿದ್ದ ನುಡಿನಾದ ಕನ್ನಡ ನುಡಿಯ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ನಾಡಿನ ಧ್ವನಿ ದುಂಬಿಯಂತೆ ಝೇಂಕರಿಸಬೇಕು. ಹಾಗೆ ಹೃದಯ ತುಂಬಿ ಕನ್ನಡವನ್ನು ಆಸ್ವಾದಿಸುತ್ತಾ ಭಾಷೆಯನ್ನು ಉಳಿಸಿ ಬೆಳೆಸೋಣ. ಮಾತಿಗೆ ಮಾತು ಸೇರಿದರೆ, ತಾಕಿದರೆ, ಕಿಡಿ, ವಿವಾದ ಆಗಬಾರದು. ಅದು ನಾದ ಆಗಬೇಕು. ನಾದಕ್ಕೆ ಪ್ರತಿ ನಾದ ಬೇಕು ಎಂದರು.
ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣಕ್ಕೆ ರಾಜ್ಯ ಸರ್ಕಾರ ಅನೇಕ ಸೌಲಭ್ಯ ಜಾರಿಗೆ ತಂದಿದೆ. ಗುಣಮಟ್ಟದ ಶಿಕ್ಷಣ ನೀಡಲು ಕೋಟ್ಯಂತರ ರೂ. ವ್ಯಯಿಸುತ್ತಿದೆ. ತರಬೇತಿ ಹೊಂದಿದ ಅನುಭವಿ ಶಿಕ್ಷಕರ ನೇಮಕ, ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್, ಕ್ಷೀರಭಾಗ್ಯ ವಿತರಣೆಗೆ ಆದ್ಯತೆ ನೀಡಿದೆ. ಹೀಗಾಗಿ ನಮ್ಮ ಮಕ್ಕಳು ಸರ್ವತೋಮುಖ ಬೆಳವಣಿಗೆ ಹೊಂದಲು ಸರ್ಕಾರಿ ಶಾಲೆಗೆ ದಾಖಲಿಸಿ ಮಾತೃಭಾಷೆ ಕಲಿಸಬೇಕು ಎಂದು ಕಣ್ಣನ್ ಹೇಳಿದರು.
ಸನ್ಮಾನ: ರಂಗಕರ್ಮಿ ರಾಜಶೇಖರ ಕದಂಬ, ಹಿರಿಯ ಗಾಯಕಿ ಶುಭಾ ರಾಘವೇಂದ್ರ, ಬಸ್ ಕಂಡಕ್ಟರ್ ಚೌಡಯ್ಯ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಮೈಸೂರು ಈಸ್ಟ್ ಅಧ್ಯಕ್ಷ ರೋಹಿತ್ ಸುಬ್ಬಯ್ಯ, ಜಿಲ್ಲಾ ರೋಟರಾಕ್ಟ್ ಪ್ರತಿನಿಧಿ ಆರ್.ಸಂಜಯ್, ಜಿಲ್ಲಾ ರೋಟರಾಕ್ಟ್ ಕಾರ್ಯದರ್ಶಿ ಎಸ್.ರವಿಶಂಕರ್, ಪಿ.ಪಿ.ಶ್ರೀರಕ್ಷಾ, ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮುಡಾ ಮಾಜಿ ಅಧ್ಯಕ್ಷ ಯಶಸ್ವಿ ಸೋಮಶೇಖರ್ ಇನ್ನಿತರರಿದ್ದರು.



0 Comments