ಬೇಸಿಗೆಯಲ್ಲಿ ಕುಡಿವ ನೀರಿಗೆ ಸಮಸ್ಯೆಯಾಗದಿರಲಿ

 ಆಲೂರು: ಪಾಳ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವ್ಯಾ ಪುರುಷೋತ್ತಮ್ ಅಧ್ಯಕ್ಷತೆಯಲ್ಲಿ  ಸಾಮಾನ್ಯ ಸಭೆ ಆಯೋಜಿಸಲಾಗಿತ್ತು.

ಪಾಳ್ಯ ಗ್ರಾಪಂನ ನೂತನ ಕಟ್ಟಡ ಜಿಲ್ಲೆಗೆ ಮಾತ್ರವಲ್ಲದೆ ರಾಜ್ಯಕ್ಕೆ ಮಾದರಿಯಾಗಿರುವುದು ಹೆಮ್ಮೆಯ ಸಂಗತಿ. ಕಣ್ಮನ ಸೆಳೆಯುತ್ತಿರುವ ನೂತನ ಕಟ್ಟಡ ಎಲ್ಲ ಪಂಚಾಯಿತಿಗಳಿಗೆ ಸ್ಫೂರ್ತಿದಾಯಕ ಎಂದು ಸಭೆಯಲ್ಲಿ ಮೆಚ್ಚುಗೆ ವ್ಯಕ್ತವಾಯಿತು. ಅಲ್ಲದೆ ಮುಂದಿನ ದಿನಗಳಲ್ಲಿ ಗ್ರಾಪಂಗೆ ಆದಾಯ ಕ್ರೋಢೀಕರಿಸುವ ವಿವಿಧ ಯೋಜನೆಯಗಳ ಬಗ್ಗೆ ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಈಗಾಗಲೇ 15ನೇ ಹಣಕಾಸು ಯೋಜನೆಯಡಿ ಕೈಗೆತ್ತಿಕೊಂಡಿರುವ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕುರಿತು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಸೌಲಭ್ಯ ಕಲ್ಪಿಸುವ ಹಾಗೂ ವಸತಿ ರಹಿತರಿಗೆ ನಿವೇಶನವನ್ನು ಒದಗಿಸುವ ಬಗ್ಗೆ ಚರ್ಚೆ ನಡೆಯಿತು. ಬೇಸಿಗೆ ಕಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಒದಗಿಸುವ ಕುರಿತು ಚರ್ಚಿಸಲಾಯಿತು.

ಅಧ್ಯಕ್ಷೆ ಭವ್ಯ ಪುರುಷೋತ್ತಮ್ ಮಾತಾನಾಡಿ, ನಮ್ಮ ಅಧಿಕಾರವಧಿಯಲ್ಲಿ ಎಲ್ಲ ಸದಸ್ಯರು ಅಭಿಪ್ರಾಯಾನುಸಾರ ಕೆಲಸಗಳನ್ನು ಕಾರ್ಯಗತಗೊಳಿಸಲಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆ ಪೂರ್ವದಲ್ಲಿ ಜನರು ನಮ್ಮ ಮೇಲೆ ನಿರೀಕ್ಷೆಯಿಟ್ಟು ಮತ ನೀಡಿ ಆಯೆ ್ಕಮಾಡಿದ್ದರು. ಅದರಂತೆ ಸ್ಥಳೀಯ ಸಂಪನ್ಮೂಲ ಕ್ರೋಢೀಕರಣ, 15ನೇ ಹಣಕಾಸಿನ ಅನುದಾನದೊಂದಿಗೆ ಗ್ರಾಪಂ ಮಾಜಿ ಅಧ್ಯಕ್ಷರು, ಸದಸ್ಯರು, ಉದ್ಯಮಿಗಳು, ಸ್ಥಳೀಯ ಮುಖಂಡರ ಸಹಕಾರ ಹಾಗೂ 18 ಜನ ಸದಸ್ಯರ ಬೆಂಬಲದಿಂದ ನೂತನ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಹೊಸ ಯೋಜನೆ ಅನುಷ್ಠಾನದ ಮೂಲಕ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಧನಂಜಯ್ ಮಾತನಾಡಿ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಪಂಚಾಯಿತಿಗೆ 126 ಮನೆಗಳು ಮಂಜೂರಾಗಿದೆ. ಅವುಗಳಲ್ಲಿ 110 ಜನರಲ್, 16 ಎಸ್ಸಿ ಜನಾಂಗದವರಿಗೆ ಮೀಸಲಾಗಿದ್ದು, ಈ ಬಾರಿ ವಸತಿ ರಹಿತ ಫಲಾನುಭವಿಗಳ ಪಟ್ಟಿ ತಯಾರಿಸಿ ಅಂತವರಿಗೆ ಮಾತ್ರ ಮನೆ ಹಂಚುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಬೇಸಿಗೆ ಸಮೀಪ ಇರುವುದರಿಂದ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಆಗದಂತೆ ಮತ್ತು ವಿದ್ಯುತ್ ಸಮಸ್ಯೆ ಬಗೆಹರಿಸುವ ಬಗ್ಗೆ ಹಾಗೂ ಜೆಜೆಎಂ ಯೋಜನೆಯಡಿ ಪ್ರತಿ ಹಳ್ಳಿಗೂ ಕುಡಿಯುವ ನೀರು ಸರಬರಾಜಿನ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ಉಮೇಶ್, ಸದಸ್ಯರಾದ ಬೀರೇಗೌಡ, ಪ್ರಕಾಶ್, ಕಲ್ಯಾಣ ಕುಮಾರ್, ಮಂಜುನಾಥ್, ಆನಂದ್, ವೆಂಕಟೇಶ್, ಚನ್ನಕೇಶವ, ಅಶ್ವಥ್, ಕಲ್ಪನಾ, ರಾಧಾ, ಅಂಬುಜಾ, ವಿಜಯಲಕ್ಷ್ಮೀ, ಯೋಗಲಕ್ಷ್ಮೀ, ಪ್ರೇಮಾ, ನೀಲಮ್ಮ, ಬಿಂದಮ್ಮ, ಕಾರ್ಯದರ್ಶಿ ಮಂಜೇಗೌಡ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ರಮೇಶ್ ಹಾಜರಿದ್ದರು.

Post a Comment

0 Comments