ನುಗ್ಗೇಹಳ್ಳಿ: ಹೋಬಳಿ ಕೇಂದ್ರದ ಎಪಿಎಂಸಿ ಉಪ ಮಾರುಕಟ್ಟೆ ಆವರಣದಲ್ಲಿ ವಾಣಿಜ್ಯ ಮಳಿಗೆಗಳು ಪ್ರಾಂಗಣಗಳ ನಿರ್ಮಾಣ, ಕುಡಿಯುವ ನೀರು ಸೇರಿದಂತೆ 1.5 ಕೋಟಿ ರೂ.ವೆಚ್ಚದ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಹೋಬಳಿ ಕೇಂದ್ರದ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ತೆಂಗಿನ ಕಾಯಿ ಸಂತೆಗೆ ಚಾಲನೆ ನೀಡಿ ಮಾತನಾಡಿದರು. ಕಳೆದ 30 ವರ್ಷಗಳ ಹಿಂದೆ ಹೋಬಳಿ ಕೇಂದ್ರದ ಎಪಿಎಂಸಿ ಉಪಮಾರುಕಟ್ಟೆಯಲ್ಲಿ ತೆಂಗಿನಕಾಯಿ ಸೇರಿದಂತೆ ರೈತರು ಬೆಳೆದ ಕೃಷಿ ಉತ್ಪನ್ನಗಳ ಸಂತೆ ನಡೆಯುತ್ತಿತ್ತು. ಕೆಲವು ಸಮಸ್ಯೆಗಳ ಕಾರಣದಿಂದ ಸಂತೆ ಸ್ಥಗಿತವಾಗಿತ್ತು. ಆದರೆ ರೈತರು ಹಾಗೂ ಕಾಯಿ ವ್ಯಾಪಾರಸ್ಥರ ಮನವಿ ಮೇರೆಗೆ ಪ್ರತಿ ಭಾನುವಾರ ತೆಂಗಿನಕಾಯಿ, ಜಾನುವಾರುಗಳು ಹಾಗೂ ತರಕಾರಿ ಸೇರಿದಂತೆ ರೈತರು ಬೆಳೆದ ಎಲ್ಲ ಪದಾರ್ಥಗಳನ್ನು ಮಾರಾಟ ಮಾಡಲು ಸಂತೆಯ ಮೂಲಕ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ರೈತರು ಹಾಗೂ ತೆಂಗಿನಕಾಯಿ ವ್ಯಾಪಾರಿಗಳ ಮನವಿ ಮೇರೆಗೆ ಹೋಬಳಿ ಕೇಂದ್ರದ ಎಪಿಎಂಸಿ ಆವರಣದಲ್ಲಿ ಈ ವಾರದ ಭಾನುವಾರದಿಂದಲೇ ಅಧಿಕೃತವಾಗಿ ಸಂತೆ ಪ್ರಾರಂಭಿಸಲಾಗಿದೆ. ಹಿರಿಸಾವೆ, ಬಾಗೂರು, ನುಗ್ಗೇಹಳ್ಳಿ ಹೋಬಳಿ ವ್ಯಾಪ್ತಿಯ ರೈತರಿಗೆ ನೂತನ ಸಂತೆಯಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು. ಮಾರುಕಟ್ಟೆ ಸಚಿವರಿಗೆ ಈಗಾಗಲೇ ಮನವಿ ಮಾಡಿ ಉಪ ಮಾರುಕಟ್ಟೆಯಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿಸಿದ್ದೇನೆ. ತಾಲೂಕು ಎಪಿಎಂಸಿಯಿಂದ 1 ಕೋಟಿ ರೂ. ಹೆಚ್ಚುವರಿ ಆಗಿ ಅನುದಾನ ನೀಡಿ ಆವರಣದಲ್ಲಿ ಹೈಟೆಕ್ ಶೌಚಗೃಹ, ಹೈಮಾಸ್ಟ್ ದ್ವೀಪ, ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು. ತೆಂಗಿನಕಾಯಿ ವ್ಯಾಪಾರಿಗಳು ರೈತರಿಗೆ ಮೋಸವಾಗದಂತೆ 1 ಕೆಜಿ ತೆಂಗಿನಕಾಯಿಗೆ 2 ರೂ. ಹೆಚ್ಚು ಹಣ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಬಿ. ಆರ್. ದೊರೆಸ್ವಾಮಿ ಮಾತನಾಡಿ ಹೋಬಳಿ ಕೇಂದ್ರದ ಎಪಿಎಂಸಿ ಉಪಮಾರುಕಟ್ಟೆ 30 ವರ್ಷಗಳ ನಂತರ ನೂತನವಾಗಿ ಪ್ರಾರಂಭವಾಗಿ 1 ದಿನದಲ್ಲಿ 400 ಟನ್ ತೆಂಗಿನಕಾಯಿ ವ್ಯಾಪಾರವಾಗಿದೆ. ರೈತರು ಹೆಚ್ಚು ಸಂತಸಗೊಂಡಿದ್ದಾರೆ. ಶಾಸಕರು ಈ ಸಂತೆಯ ಅಭಿವೃದ್ಧಿಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಹೊನ್ನೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ್, ಟಿಎಪಿ ಎಂಎಸ್ ನಿರ್ದೇಶಕ ತೋಟಿ ನಾಗರಾಜ್, ತಾಲೂಕು ತೆಂಗಿನಕಾಯಿ ಮಾರಾಟಗಾರರ ಸಂಘದ ಅಧ್ಯಕ್ಷ ಕುಮಾರ್, ಎಪಿಎಂಸಿ ಕಾರ್ಯದರ್ಶಿ ಸೋಮಶೇಖರ್, ಆಡಳಿತ ಅಧಿಕಾರಿ ವಿಜಯಲಕ್ಷ್ಮೀ, ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ್, ಶಿವಕುಮಾರ್, ನಟರಾಜ್ ಯಾದವ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಚ್.ಪಿ. ಸಂಪತ್ ಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಸವನಪುರ ಪ್ರಕಾಶ್, ಮುಖಂಡರಾದ ಬೆಳಗಿಹಳ್ಳಿ ಪುಟ್ಟಸ್ವಾಮಿ, ಪಟೇಲ್ ಕುಮಾರ್, ಜೈಲಿಂಗೇಗೌಡ, ಎನ್.ಆರ್.ಮುರಳಿ, ಮುದ್ದನಹಳ್ಳಿ ರಂಗೇಗೌಡ, ಪ್ರಕಾಶ್, ಉಮೇಶ್, ಎನ್.ಡಿ. ಶಂಕರ್, ಕುಳ್ಳೇಗೌಡ, ಗೋಪಾಲ್, ಶೆಟ್ಟಿಹಳ್ಳಿ ಸ್ವಾಮಿ, ವಿರುಪಾಕ್ಷಿಪುರ ರವಿ, ಗೋಪಾಲ್, ಮುದ್ದನಹಳ್ಳಿ ರಾಮಕೃಷ್ಣ, ಬಾಣನಕೆರೆ ಮಂಜು, ಪುನೀತ್, ದಾಸಪುರ ಕೆಂಪೇಗೌಡ, ಆನಂದ್, ಇತರರು ಇದ್ದರು.



0 Comments