ಹಾಸನ: ಕನ್ನಡ ಚಲನಚಿತ್ರ ರಂಗದ ನಟರಾಕ್ಷಸ ಖ್ಯಾತಿನ ನಟ ಡಾಲಿ ಧನಂಜಯ್, ತಾವು ಹುಟ್ಟಿದ ಹಳ್ಳಿಯ ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡುತ್ತಿದ್ದಾರೆ. ತಮ್ಮ ಮದುವೆಯ ಸ್ಮರಣಾರ್ಥ ಈ ಮಾದರಿ ಕಾರ್ಯ ಮಾಡುತ್ತಿದ್ದಾರೆ.
ಡಾಲಿ ಧನಂಜಯ, ಅರಸೀಕೆರೆ ತಾಲೂಕಿನ ಕಾಳೇನಹಳ್ಳಿ ಹಟ್ಟಿಯಲ್ಲಿ ಜನ್ಮ ಪಡೆದರು. ಆದರೆ ವಿದ್ಯಾಭ್ಯಾಸ ಪಡೆದಿದ್ದು ಬೇರೆ ಕಡೆ. ಓದಿ ಉತ್ತಮ ವ್ಯಾಸಂಗ ಪಡೆದು, ಅದೃಷ್ಟವಶಾತ್ ಕನ್ನಡ ಚಿತ್ರರಂಗದಲ್ಲಿ ಉತ್ತಮ ಅಭಿನಯದ ಮೂಲಕ ತಮ್ಮದೇ ಛಾಪು ಮೂಡಿಸಿರುವ ಧನಂಜಯ್, ಇದೀಗ ವೈವಾಹಿಕ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ. ತಮ್ಮ ಮದುವೆಯ ಸಂದರ್ಭವನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಮಾದರಿ ಆಗುವ ಕೆಲಸ ಮಾಡುತ್ತಿದ್ದಾರೆ.
ತಮ್ಮೂರಿನ 1-7 ನೇ ತರಗತಿವರೆಗಿನ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೈ ಟೆಕ್ ಸ್ಪರ್ಶ ನೀಡಲು ಮುಂದಾಗಿದ್ದಾರೆ. ಶಾಲೆಯಲ್ಲಿ ಹಾಲಿ 80 ಮಕ್ಕಳಿದ್ದಾರೆ. ತಮ್ಮ ಮದುವೆಯನ್ನು ಅರ್ಥಪೂರ್ಣಗೊಳಿಸಲು ಇಡೀ ಶಾಲೆಗೆ ಕಾಯಕಲ್ಪ ನೀಡುವ ಮೂಲಕ ಸರ್ಕಾರಿ ಶಾಲೆ ಉಳಿಸಲು ಮುಂದಾಗಿದ್ದಾರೆ. ಇಡೀ ಶಾಲೆಯ ನೆಲಕ್ಕೆ ಟೈಲ್ಸ್, ಬಣ್ಣ ಮಾಸಿದ ಶಾಲೆಯ ಎಲ್ಲ ಗೋಡೆಗಳಿಗೆ ಸಂಪೂರ್ಣ, ಬಿರುಕು ಬಿಟ್ಟಿದ್ದ ಗೋಡೆ, ಅಂತಸ್ತಿಗೆ ಚುರಕಿ, ಗೇಟ್ ದುರಸ್ತಿ, ಶಿಕ್ಷಕರ ಕೊಠಡಿಗೆ ಹೊಸ ರೂಪ, ಶೌಚಾಲಯ ಸುಸ್ಥಿತಿ, ಅಚ್ಚುಕಟ್ಟು ಅಡುಗೆ ಮನೆ, ಹೀಗೆ ತನ್ನೂರಿನ ಶಾಲೆಗೆ ಹೈಟೆಕ್ ಸ್ಪರ್ಶ ನೀಡುತ್ತಿದ್ದಾರೆ.
ಅಂದಹಾಗೆ ಧನಂಜಯ್ ಅವರ ಮದುವೆ ವೈದ್ಯೆ ಜೊತೆ ಮುಂದಿನ ತಿಂಗಳು 15 ಮತ್ತು 16ರಂದು ಮೈಸೂರಿನಲ್ಲಿ ನಡೆಯಲಿದ್ದು, ಅದನ್ನು ಸಾರ್ಥಕಗೊಳಿಸಲು ಸುಮಾರು 200 ಕ್ಕೂ ಹೆಚ್ಚು ಮನೆಗಳಿರುವ ಸ್ವಗ್ರಾಮಕ್ಕೆ ಹಾಗೂ ಶಾಲೆಗೆ ಬೇಕಾದ ಎಲ್ಲ ಸೌಲಭ್ಯ ಕಲ್ಪಿಸುತ್ತಿದ್ದಾರೆ.
ತಾವು ಹುಟ್ಟಿನದ ಊರಿನ ಶಾಲೆಯಲ್ಲಿ ಓದದೇ ಇದ್ದರೂ ಅದಕ್ಕೀಗ ಹೊಸತನ ಕೊಡಲು ಮುಂದಾಗಿರುವ ನಟ ಡಾಲಿ ಧನಂಜಯ ಅವರ ಪ್ರಯತ್ನಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಶಾಲೆಗೆ ಓವರ್ ಹೆಡ್ ಟ್ಯಾಂಕ್, ವಾಟರ್ ಫಿಲ್ಟರ್ ಜತೆಗೆ ಹಳೆಯ ಅರಳೀಮರದ ಸುತ್ತ ಕಟ್ಟೆ ಕಟ್ಟಿಸುತ್ತಿದ್ದಾರೆ. ಬಲ ಕಳೆದುಕೊಂಡಿದ್ದ ಕಿಟಕಿ, ಕುರ್ಚಿ, ಮೇಜನ್ನೂ ಬದಲಾವಣೆ ಮಾಡಿಸುತ್ತಿದ್ದಾರೆ. ಇದಕ್ಕಾಗಿ 5 ರಿಂದ 7 ಲಕ್ಷ ರೂ.ವೆಚ್ಚ ಆಗಿದೆ. ಆ ಬಗ್ಗೆ ಕನ್ನಡದ ನಟ ತಲೆ ಕೆಡಿಸಿಕೊಂಡಿಲ್ಲ. ಎಷ್ಟಾದರೂ ಖರ್ಚಾಗಲಿ, ನಮ್ಮೂರ ಶಾಲೆ ನಾಜೂಕಾಗಿರಬೇಕು. ಆ ಮೂಲಕ ಮಕ್ಕಳ ಹಾಜರಾತಿ ಹೆಚ್ಚಳವಾಗಿ ಸರ್ಕಾರಿ ಶಾಲೆ ಉಳಿಯಬೇಕು ಎಂಬ ಸದಾಶಯ ಹೊಂದಿ, ಅದನ್ನು ಅಕ್ಷರಶಃ ಸಾಕಾರಗೊಳಿಸುತ್ತಿದ್ದಾರೆ.



0 Comments