ಅರಸೀಕೆರೆ : ಆಧಾರ ರಹಿತ ಹಾಗೂ ಸುಳ್ಳು ದೂರನ್ನು ಪರಿಗಣಿಸಿ ದಲಿತ ದೌರ್ಜನ್ಯ ಕೇಸು ದಾಖಲಿಸಿರುವ ಪೊಲೀಸರ ಕ್ರಮ ಖಂಡಿಸಿ ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಹಾಗೂ ಮತ್ತವರ ಬೆಂಬಲಿಗರು ಭಾನುವಾರ ತಡರಾತ್ರಿ ಬಸವೇಶ್ವರ ವೃತ್ತದಲ್ಲಿ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ವೀರಸಾರ್ವಕರ್ ಭಾವಚಿತ್ರವಿಟ್ಟು ದಿಢೀರ್ ಧರಣಿ ನಡೆಸಿದರು.
ರಾಜಕೀಯ ಪ್ರತಿರೋಧ ತಾಳಲಾರದೇ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ನಗರಸಭೆ ಅಧ್ಯಕ್ಷ ಸಮೀವುಲ್ಲ ಆಧಾರ ರಹಿತ ದಲಿತ ದೌರ್ಜನ್ಯ ಕೇಸು ದಾಖಲಿಸಲು ಹೊರಟಿದ್ದಾರೆ. ನಗರಸಭೆಯಲ್ಲಿ ನಡೆದಿರುವ ಭಾರಿ ಅಕ್ರಮ, ಬ್ರಹ್ಮಾಂಡ ಭ್ರಷ್ಟಾಚಾರ ಕುರಿತು ಮಾತನಾಡಿದ್ದನ್ನೇ ಮುಂದಿಟ್ಟು ಉಪಾಧ್ಯಕ್ಷ ಮನೋಹರ್ ಮೂಲಕ ಹದಿನಾಲ್ಕು ಜನರ ವಿರುದ್ಧ ರಾತ್ರೋರಾತ್ರಿ ಪ್ರಕರಣ ದಾಖಲಿಸಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಜಾಜೂರು ಹೊರವಲಯದಲ್ಲಿರುವ ಸರ್ಕಾರಿ ಗೋಮಾಳ, ಸ್ಮಶಾನ ಕಬಳಿಕೆ ಮಾಡಿ ನಿವೇಶವನ್ನಾಗಿ ಪರಿವರ್ತಿಸಿ ಕೋಟಿ, ಕೋಟಿ ಹಣ ಮಾಡಲಾಗುತ್ತಿದೆ. ಸೋಲಾರ್ ಯೋಜನೆ ನೆಪದಲ್ಲಿ 350 ಎಕರೆ ಭೂಮಿ ಖಾಸಗಿ ಕಂಪನಿಗೆ ಕೊಟ್ಟು ದೊಡ್ಡಮಟ್ಟದ ಲಾಭ ಮಾಡಿಕೊಳ್ಳುವ ಹುನ್ನಾರ ನಡೆದಿದ್ದು ರೈತರು ಎಚ್ಚೆತ್ತುಕೊಳ್ಳಬೇಕು. ಚಗಚಗೆರೆ ಗ್ರಾಮ ಪಂಚಾಯಿತಿ ನರೇಗಾ ಕಾಮಗಾರಿಯಲ್ಲಿ ಬರೊಬ್ಬರಿ 2.5 ಕೋಟಿ ರೂ.ಅಕ್ರಮ ಮಾಡಲಾಗಿದೆ. ತಾಪಂ ಇಒ ಅವರನ್ನು ಪ್ರಶ್ನಿಸಿದ ಕೆಲವೇ ಗಂಟೆಗಳಲ್ಲಿ ನನ್ನ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಲಾಗಿದೆ. ಇಂತಹ ಬೆದರಿಕೆಗೆ ಜಗ್ಗುವ, ಬಗ್ಗುವ ಜಾಯಮಾನ ನನ್ನದಲ್ಲ. ಕ್ಷೇತ್ರದ ಜನರ ಕಲ್ಯಾಣಕ್ಕಾಗಿ ಜೀವ ಕೊಡಲು ಸಿದ್ಧನಿದ್ದೇನೆ. ಗೋಮಾಳ, ಕೆರೆ,ಕುಂಟೆಗಳನ್ನು ನುಂಗಿ ನೀರು ಕುಡಿಯಲು ಬಿಡುವುದಿಲ್ಲ ಎಂದು ಕಿಡಿಕಾರಿದರು.
ಪ್ರತಿಭಟನಾ ನಿರತರೊಂದಿಗೆ ಸರಣಿ ಮಾತುಕತೆ ನಡೆಸಿದ ಡಿವೈಎಸ್‌ಪಿ ಲೋಕೇಶ್ ಮಾತುಕತೆ ನಡೆಸಿ ದೂರನ್ನು ಪರಾಮರ್ಶಿಸಿ ನ್ಯಾಯ ಒದಗಿಸುವ ಭರವಸೆ ನೀಡಿದ ಬಳಿಕ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಎ.ಬಿ.ಗುರುಸಿದ್ದೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಶಿವಾಳ ಗಂಗಾಧರ್,ನಗರಸಭೆ ನಿಕಟಪೂರ್ವ ಅಧ್ಯಕ್ಷ ಸಿ.ಗಿರೀಶ್, ಸದಸ್ಯರಾದ ಭಾಸ್ಕರ್, ಮೇಲುಗಿರಿಗೌಡ, ಮಾಜಿ ಅಧ್ಯಕ್ಷ ಬಿ.ಎನ್.ವಿದ್ಯಾಧರ್,ಮುಖಂಡರಾದ ಕಾಟೀಕೆರೆ ಮೋಹನ್ ಕುಮಾರ್, ಮಂಜುನಾಥ್,ಉಮೇಶ್ ಭೋವಿ, ಮಾಡಾಳು ಚಂದ್ರಶೇಖರ್ ಮಾದನಹಳ್ಳಿ ನಾಗರಾಜ್,ರಮೇಶ್ ನಾಯ್ಡು, ಶಿವನ್‌ರಾಜ್,ರಮೇಶ್, ಕಿರಣ್, ಗಣೇಶ್, ನಿವೃತ್ತ ಸೈನಿಕ ನವೀನ್ ಕುಮಾರ್, ಉಮೇಶ್, ಜಯದೇವ್ ಇನ್ನಿತರರಿದ್ದರು.



0 Comments