ಅರಕಲಗೂಡು : ಆಧುನಿಕತೆಗೆ ಅನುಗುಣವಾಗಿ ಶೈಕ್ಷಣಿಕ ವ್ಯವಸ್ಥೆ ಸುಧಾರಣೆಗೊಳಿಸಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ಅಮೇರಿಕದಂತಹ ಹೊರ ದೇಶಗಳಲ್ಲಿ ಉನ್ನತ ಹುದ್ದೆ ಗಿಟ್ಟಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಗಂಗೂರಿನಲ್ಲಿ ಶ್ರೀ ವಾಗ್ದೇವಿ ವಿದ್ಯಾಸಂಸ್ಥೆಯನ್ನು ಆದಿಚುಂಚನಗಿರಿ ಮಠದ ಸುಪರ್ದಿಗೆ ವಹಿಸಿದ ಹಿನ್ನ್ನೆಲೆಯಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಸೋಮವಾರ ಸಿಬಿಎಸ್‌ಇ ಶಾಲೆ ಸ್ಥಾಪನೆಗೆ ಭೂಮಿಪೂಜೆ ನೆರವೇರಿಸಿ ಆಶೀರ್ವಚನ ನೀಡಿ ಮಾತನಾಡಿದರು.ದೇಶಗಳಲ್ಲಿ ನಳಂದ ವಿವಿಯಂತೆ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಶಿಕ್ಷಣ ಸಿಗುತ್ತಿದ್ದ ಕಾರಣ ಹೊರ ದೇಶಗಳ ಮಕ್ಕಳು ವಿದ್ಯೆ ಕಲಿಯಲು ಬರುತ್ತಿದ್ದರು. ಈಗಿನ ವಿದ್ಯಾಸಂಸ್ಥೆಗಳು ಕೂಡ ಆಧುನಿಕತೆಗೆ ತಕ್ಕಂತೆ ಶಿಕ್ಷಣ ಒದಗಿಸುತ್ತಿವೆ. ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಸಂಸ್ಥೆಗಳಲ್ಲಿ 1.65 ಲಕ್ಷ ಮಕ್ಕಳು ಕಲಿಯುತ್ತಿದ್ದು ಉನ್ನತ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
ದೇಶದಲ್ಲಿ ಒಂದು ಕಾಲಕ್ಕೆ ಊಟಕ್ಕೂ ತೊಂದರೆ ಇತ್ತು. ಈಗ ಕಾಲ ಬದಲಾಗಿದ್ದು ನಮ್ಮ ದೇಶವನ್ನು ಹೀಯಾಳಿಸುತ್ತಿದ್ದ ರಾಷ್ಟ್ರಗಳು ತಿರುಗಿ ನೋಡುವಷ್ಟು ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳಿಗೆ ವಿದ್ಯೆಯೊಂದಿಗೆ ಉತ್ತಮ ಸಂಸ್ಕೃತಿ ಕಲಿಕೆಯೂ ಮುಖ್ಯ. ಇದಕ್ಕಾಗಿ ಮೊದಲು ತಾಯಂದಿರು ತಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಹಿರಿಯರು ಕಟ್ಟಿದ ಈ ವಿದ್ಯಾಸಂಸ್ಥೆಯಲ್ಲಿ ಸಿಬಿಎಸ್‌ಇ ಯಿಂದ ಪಿಯು ಶಿಕ್ಷಣದವರೆಗೆ ಮಕ್ಕಳಿಗೆ ವಿದ್ಯೆ ನೀಡಲು ಕ್ರಮ ವಹಿಸಲಾಗುವುದು. ಮಠದ ಕಾರ್ಯಗಳಿಗೆ ಜನರು ಕೈ ಜೋಡಿಸಲಿದ್ದಾರೆ. ಈ ವಿದ್ಯಾಸಂಸ್ಥೆಯನ್ನು ಉನ್ನತ ಶಿಕ್ಷಣ ಸಂಸ್ಥೆಯಾಗಿ ರೂಪಿಸಲಾಗುವುದು. ಒಳ್ಳೆಯ ಹೃದಯ ಹೊಂದಿರುವ ಶಾಸಕ ಎ. ಮಂಜು ಅವರು ಆದಿಚುಂಚನಗಿರಿ ಮಠಕ್ಕೆ ಹಲವಾರು ರೀತಿಯಲ್ಲಿ ಸೇವೆ ನೀಡಿದ್ದಾರೆ. ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ಮಠದ ಜತೆಯಲ್ಲಿದ್ದು ಸಹಕಾರ ಕೊಡಬೇಕು ಎಂದರು.
ಶಾಸಕ ಎ. ಮಂಜು ಮಾತನಾಡಿ, ಹಳ್ಳಿ ಮಕ್ಕಳಿಗೆ ಉನ್ನತ ಶಿಕ್ಷಣ ಒದಗಿಸುವ ಉದ್ದೇಶದಿಂದ ಈ ಶಿಕ್ಷಣ ಸಂಸ್ಥೆಯನ್ನು ಆದಿಚುಂಚನಗಿರಿ ಮಠಕ್ಕೆ ಹಸ್ತಾಂತರಿಸಲಾಗಿದೆ. ಕಷ್ಡಪಟ್ಟು ಶಿಕ್ಷಣ ಪಡೆದಿದ್ದ ದಿ. ಎಚ್.ಎನ್. ನಂಜೇಗೌಡರು ಈ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂದು ಕಂಡಿದ್ದ ಕನಸು ಕೂಡ ನನಸಾಗಲಿದ್ದು ಅವರ ಆಸೆ ಈಡೇರಲಿದೆ ಎಂದು ಹೇಳಿದರು.
ಆದಿಚುಂಚನಗಿರಿ ಮಠಕ್ಕೆ ಕಾವೇರಿ ನದಿ ತಟದ ಸೂಕ್ತ ಸ್ಥಳದಲ್ಲಿ ಜಾಗ ನೀಡಲು ಕ್ರಮ ವಹಿಸುತ್ತೇನೆ. ಮಠದ ಅಭಿವೃದ್ಧಿ ಕೆಲಸಗಳಿಗೆ ಜತೆಯಲ್ಲಿರುವುದಾಗಿ ಭರವಸೆ ನೀಡಿದರು.
ಹಾಸನ ಆದಿಚುಂಚನಗಿರಿ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಬಿಇಒ ನಾರಾಯಣ್, ಜಿಪಂ ಮಾಜಿ ಸದಸ್ಯರಾದ ತಾರಾ ಮಂಜು, ಬಿ.ಜೆ. ಅಪ್ಪಣ್ಣ, ಮುಖಂಡರಾದ ಲೋಕನಾಥಗೌಡ, ಕೆ. ಸತೀಶ್, ಚೌಡೇಗೌಡ, ಬಿಜಿಎಸ್ ಕಾಲೇಜು ಪ್ರಾಂಶುಪಾಲ ಮಹೇಶ್ ಹೊಡೆನೂರು, ನೆಹರು ಗ್ರಾಮಾಂತರ ಪ್ರೌಢಶಾಲೆ ಮುಖ್ಯ ಶಿಕ್ಷಕ ಈಶ್ವರೇಗೌಡ ಇತರರಿದ್ದರು.
ಪಾದಪೂಜೆ: ಇದಕ್ಕೂ ಮುನ್ನ ಹನ್ಯಾಳು ಗ್ರಾಮದ ಮನೆಯಲ್ಲಿ ಶಾಸಕ ಎ. ಮಂಜು ದಂಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಪಾದಪೂಜೆ ನಡೆಸಿ ಆಶೀರ್ವಾದ ಪಡೆದರು.



0 Comments