ನಾನು ಅಷ್ಟೇ, ಪ್ರಜ್ವಲ್ ರೇವಣ್ಣನೂ ಅಷ್ಟೇ, ಈ ಜಿಲ್ಲೆಯ ಋಣ ತೀರಿಸುವ ಕೆಲಸ ಮಾಡೇ ಮಾಡ್ತೀವಿ: ಸೂರಜ್ ರೇವಣ್ಣ ಶಪಥ

 ಹಾಸನ: ನಾನು ಮತ್ತು ಪ್ರಜ್ವಲ್ ರೇವಣ್ಣ (Prajwal Revanna) ಹಾಸನ ಜಿಲ್ಲೆಯ (Hassan Politics) ಋಣ ತೀರಿಸುವ ಕೆಲಸ ಮಾಡೇ ಮಾಡ್ತೀವಿ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ, ಡಾ. ಸೂರಜ್ ರೇವಣ್ಣ (Dr Suraj Revanna) ಶಪಥ ಮಾಡಿದ್ದಾರೆ.ಜೆಡಿಎಸ್‌ ಎಂಎಲ್‌ಸಿ ಡಾ.ಸೂರಜ್‌ ರೇವಣ್ಣ ಅವರ ಹುಟ್ಟುಹಬ್ಬ ಹಿನ್ನೆಲೆ ನಿನ್ನೆ ರಾತ್ರಿ ಚನ್ನರಾಯಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಸೂರಜ್‌ ರೇವಣ್ಣ, ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ಸೂರ್ಯ ಹುಟ್ಟೋದು ಮಾತ್ರವಲ್ಲ, ಸೂರ್ಯ ಪ್ರಜ್ವಲಿಸುತ್ತಾನೆ ಅನ್ನೋದು ನೆನಪಿರಲಿ ಎಂದು ಹೇಳಿದ ಸೂರಜ್ ರೇವಣ್ಣ, ನಿಮ್ಮ ಪ್ರಜ್ವಲ್ ಅಣ್ಣ ಕೂಡ ಅಷ್ಟೇ, ನಿಮ್ಮ ಸೂರಜ್ ಅಣ್ಣ ಕೂಡ ಅಷ್ಟೇ. ಈ ಜಿಲ್ಲೆಯ ಋಣ ತೀರಿಸುವ ಕೆಲಸ ಮಾಡೇ ಮಾಡುತ್ತೇವೆ ಎಂದು ಗುಡುಗಿದರು.

ಕೆಲವು ಅಧಿಕಾರಿಗಳು, ಕೆಲವು ವಿರೋಧಿಗಳು ನಮ್ಮ ಕಾರ್ಯಕರ್ತರಿಗೆ ಯಾವ ರೀತಿ ತೊಂದರೆ ಕೊಡುತ್ತಿದ್ದಾರೆ ಅನ್ನೋದನ್ನ ನೋಡುತ್ತಿದ್ದೇವೆ ಎಂದ ಡಾ.ಸೂರಜ್‌ ರೇವಣ್ಣ, ಯಾವುದೂ ಕೂಡ ಶಾಶ್ವತವಲ್ಲ, ಯಾವ ಸರ್ಕಾರ ಕೂಡ ಶಾಶ್ವತವಲ್ಲ. ನಾನು, ನನ್ನಿಂದ ಮಾಡಿದ್ದು ಅಂತ ಹೇಳಿದವರು ಒಮ್ಮೆ ಸ್ಮಶಾನಕ್ಕೆ ಹೋಗಿ ಬನ್ನಿ. ಎಂಥೆಂತವರು ಏನೇನ್ ಆಗಿದ್ದಾರೆ ಅನ್ನೋದು ಗೊತ್ತಾಗುತ್ತೆ ಎಂದು ಕಿಡಿಕಾರಿದರು.

ನಾವು ಮಾಡುವ ಒಳ್ಳೆಯ ಕೆಲಸ ಮಾತ್ರ ಈ ಭೂಮಿ ಮೇಲೆ ಉಳಿಯುತ್ತದೆ ಎಂದ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ ರೇವಣ್ಣ, ಈ ದ್ವೇಷದ ರಾಜಕಾರಣ ಉಳಿಯಲ್ಲ. ನಿಮಗೆ 135 ಸೀಟ್ ಕೊಟ್ಟಿರೋದು ಕೆಲಸ ಮಾಡಲಿ, ಜನಕ್ಕೆ ಒಳ್ಳೆಯದು ಮಾಡಲಿ ಅಂತ. ಅದನ್ನು ಬಿಟ್ಟು ದಿನ ಬೆಳಿಗ್ಗೆಯಾದರೆ ರೇವಣ್ಣ ಅವರನ್ನು ಹೇಗೆ ತುಳಿಯೋದು, ದೇವೇಗೌಡರ ಕುಟುಂಬನ ಹೇಗೆ ಮುಗಿಸೋದು ಬರೀ ಇದನ್ನೇ ಮಾಡುತ್ತಿದ್ದೀರಿ. ಸರ್ಕಾರ ಬಂದು ಎಷ್ಟು ತಿಂಗಳು ಆಯ್ತು, ಯಾವ ರೈತರಿಗೆ ಒಳ್ಳೆಯದಾಗಿದೆ ಎಂದು ಪ್ರಶ್ನಿಸಿದರು.

ಕುತಂತ್ರಿಗಳ, ವಿರೋಧಿಗಳ, ದ್ವೇಷದ ರಾಜಕಾರಣದ ಕತ್ತಲು ಇವತ್ತು ಆವರಿಸಿಕೊಂಡಿದೆ ಎಂದು ಕಾರ್ಯಕ್ರಮದಲ್ಲಿ ಸರ್ಕಾರದ ವಿರುದ್ಧ ಗುಡುಗಿದ ಎಂಎಲ್‌ಸಿ ಡಾ.ಸೂರಜ್‌ರೇವಣ್ಣ, ಮತ್ತೆ ನಿಮ್ಮ ಸೂರಜ್‌ ರೇವಣ್ಣನ ಮೂಲಕ ಸೂರ್ಯ ಹುಟ್ಟೇ ಹುಟ್ಟುತ್ತಾನೆ. ಇವತ್ತು ಮೂಡಲಹಿಪ್ಪೆಯಿಂದ ಬೆಂಕಿ ಶುರುವಾಗಿದೆ. ಈ ದ್ವೇಷದ ರಾಜಕಾರಣ ಮಾಡುತ್ತಿರುವ ಸರ್ಕಾರ, ಕಾಂಗ್ರೆಸ್ ಸರ್ಕಾರ ಇದೆ ಅಂತ ಕುಣಿಯುತ್ತಿದ್ದಾರೆ ಅದನ್ನು ಸುಡುವಂತಹ ಪರಿಸ್ಥಿತಿ, ಕಣ್ಣೀರಿಡುವ ಪರಿಸ್ಥಿತಿ ಬಂದೇ ಬರುತ್ತೆ ಎಂದು ಟಾಂಗ್ ಕೊಟ್ಟಿದ್ದಾರೆ.

Post a Comment

0 Comments