ಯೋಜನೆಗಳ ಸಮರ್ಪಕ ಅನುಷ್ಠಾನ ಮಾಡಿ: ಸಂಸದ ಶ್ರೇಯಸ್ ಪಟೇಲ್

 ಹಾಸನ: ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು. ಯೋಜನೆಯ ಅನುಷ್ಠಾನದಲ್ಲಿ ವಿಳಂಬ ಮಾಡುವುದನ್ನು ಸಹಿಸುವುದಿಲ್ಲ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.



ಜಿಲ್ಲೆಯಲ್ಲಿ ಬಾಕಿ ಉಳಿದಿರುವ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಕಾಮಗಾರಿಗಳನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

‘ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಬೈಪಾಸ್‌ಗಳಲ್ಲಿ ಅಂಡರ್‌ಪಾಸ್ ಹಾಗೂ ರೈಲ್ವೆ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಅಗತ್ಯ ಅನುದಾನ ಬಂದಿದ್ದು, ಹಂತ ಹಂತವಾಗಿ ಕಾಮಗಾರಿ ನಿರ್ವಹಿಸಲಾಗುವುದು’ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದರು.

‘ಚನ್ನಪಟ್ಟಣ, ಬಿಟ್ಟಗೌಡನಹಳ್ಳಿ ಬೈಪಾಸ್‌ಗಳಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಲಾಗುವುದು. ಗವೇನಹಳ್ಳಿ, ಪಾಳ್ಯ, ಬಾಳ್ಳುಪೇಟೆ, ಸಕಲೇಶಪುರ ಅಂಡರ್ ಪಾಸ್ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು. ಹಿರಿಯೂರು ಸಂಪರ್ಕ ರಸ್ತೆ ನಿರ್ಮಾಣಕ್ಕೆ ₹6,500 ಕೋಟಿ ಬಿಡುಗಡೆಯಾಗಿದ್ದು, ಶೀಘ್ರ ಕಾಮಗಾರಿ ಪ್ರಾರಂಭಿಸಲಾಗುವುದು’ ಎಂದು ತಿಳಿಸಿದರು.

ಹೊಳೆನರಸೀಪುರದಲ್ಲಿ ರೈಲ್ವೆ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಸ್ವಲ್ಪ ತೊಡಕ್ಕಾಗಿದ್ದು, ಸ್ಥಳೀಯ ಆಡಳಿತದ ಸಹಕಾರ ಅಗತ್ಯವಿದೆ ಎಂದು ಸಭೆಯ ಗಮನಕ್ಕೆ ತಂದರು, ಈ ಕುರಿತು ಸಂಬಂಧಪಟ್ಟವರೊಂದಿಗೆ ಮಾತನಾಡುವುದಾಗಿ ಶ್ರೇಯಸ್‌ ಪಟೇಲ್‌ ಹೇಳಿದರು.

‘ಚಿಕ್ಕಮಗಳೂರು- ಬೇಲೂರು ರೈಲ್ವೆ ಮಾರ್ಗಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಸನ ನಗರದ ಪ್ರಮುಖ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಕ್ಕೆ ₹79 ಕೋಟಿ ಅಗತ್ಯವಿದ್ದು, ಶೇ 50ರಷ್ಟು ಹಣ ಬಿಡುಗಡೆಯಾಗಿದೆ. ಕಾಮಗಾರಿ ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು’ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

‘ಕಡೂರು –ಬೀರೂರು– ಬಾಣಾವರ ರೈಲ್ವೆ ಮಾರ್ಗದಲ್ಲಿ ಬರುವ ರೈಲ್ವೆ ಓವರ್ ಬ್ರಿಡ್ಜ್ ಕಾಮಗಾರಿಯನ್ನು ಮಾಡಬೇಕು. ಗಂಡಸಿ ಮೂಲಕ ಹಾದು ಹೋಗಿರುವ ರೈಲ್ವೆ ಮಾರ್ಗದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಶಿವಲಿಂಗೇಗೌಡ ತಿಳಿಸಿದರು.

‘ಕೃಷಿ ಇಲಾಖೆಯಿಂದ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಮಾಡಲಾಗುತ್ತಿದೆ‌. ಹಿಂಗಾರು ಮತ್ತು ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ರೈತರಿಗೆ 43 ಸಾವಿರ ಟನ್ ರಸಗೊಬ್ಬರ ಪೂರೈಸಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್‌ಕುಮಾರ್‌ ಮಾಹಿತಿ ನೀಡಿದರು.

‘ಫಸಲ್ ಬಿಮಾ ಯೋಜನೆ ಸಮರ್ಪಕವಾಗಿ ಅನುಷ್ಠಾನ ಆಗುತ್ತಿಲ್ಲ. ನಿಗದಿಪಡಿಸಿರುವ ಕಂಪನಿಗಳು ರೈತರಿಗೆ ಮೋಸ ಮಾಡುತ್ತಿವೆ’ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಆರೋಪಿಸಿದರು.

‘ಜಿಲ್ಲೆಯಲ್ಲಿ ಕೃಷಿ ಅಧಿಕಾರಿಗಳ ಕೊರತೆಯಿದ್ದು, ಎರಡು ಹೋಬಳಿಗೆ ಒಬ್ಬರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಪರಿಶೀಲನೆಗೆ ತೆರಳಿದ ವೇಳೆ ಅಧಿಕಾರಿಗಳು ಸಿಗುವುದಿಲ್ಲ’ ಎಂದು ಸಂಸದರು ಸಭೆ ಗಮನಕ್ಕೆ ತಂದರು.

ಇದಕ್ಕೆ ಉತ್ತರಿಸಿದ ಜಂಟಿ ಕೃಷಿ ನಿರ್ದೇಶಕ ರಮೇಶ್‌ಕುಮಾರ್‌, ‘ಶೇ 50ರಷ್ಟು ನೌಕರರ ಕೊರತೆಯಿಂದ ಇಲಾಖೆ ಕಾರ್ಯ ನಿರ್ವಹಿಸುತ್ತಿದ್ದು, ಹೊಸ ನೇಮಕಾತಿ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು  ಹೇಳಿದರು.

ಅರಸೀಕೆರೆ ನಗರದಲ್ಲಿ ಎಂಟು ವರ್ಷದಿಂದ ಯುಜಿಡಿ ಕಾಮಗಾರಿ ಅಸಮರ್ಪಕವಾಗಿ ನಿರ್ವಹಣೆ ಮಾಡಲಾಗಿದ್ದು, ಇದರಿಂದ ಸ್ಥಳೀಯ ನಿವಾಸಿಗಳು ಪರಿತಪಿಸುವಂತಾಗಿದೆ ಎಂದು ಶಿವಲಿಂಗೇಗೌಡ ಆರೋಪಿಸಿದರು.

ಒಟ್ಟು ಜಿಲ್ಲೆಯಲ್ಲಿ 3,410ಮಂದಿಗೆ ಗಂಗಾಕಲ್ಯಾಣ ಯೋಜನೆಯಡಿ ಸಂಪರ್ಕ ಒದಗಿಸಬೇಕಾಗಿದೆ. ವಿದ್ಯುತ್ ಸಂಪರ್ಕ ಸೇರಿದಂತೆ ಇತರ ಕಾರಣಗಳಿಂದ ಯೋಜನೆ ಕಾರ್ಯಕರ್ತವಾಗಿಲ್ಲ ಎಂದು ಶಿವಲಿಂಗೇಗೌಡ ಸಭೆಯ ಗಮನಕ್ಕೆ ತಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಡಿಸಿಎಫ್ ಸೌರಭ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ನಾಮ ನಿರ್ದೇಶಿತ ಸದಸ್ಯರಾದ ತಾರಾ ಚಂದನ್, ಮಂಜುಳಾಬಾಯಿ, ಬಸವರಾಜ್, ಎಚ್.ಪಿ. ಮೋಹನ್, ಶ್ರುತಿ ಹಾಜರಿದ್ದರು.



‘ಭೂಮಿ ಕೊಡಿ ಸನ್ಮಾನ ಮಾಡುವೆ’

‘ಅರಣ್ಯ ಇಲಾಖೆ ಭೂಮಿ ಕೊಡದೇ ಇರುವುದರಿಂದ ಎತ್ತಿನಹೊಳೆ ಯೋಜನೆ ನೀರು ಬೇಲೂರು- ಅರಸೀಕೆರೆಗೆ ಹರಿಯಲು ತೊಡಕಾಗಿದೆ. ಐದಳ್ಳ ಕಾವಲು ಬಳಿ ಅರಣ್ಯ ಇಲಾಖೆಯಿಂದ ಆದಷ್ಟು ಶೀಘ್ರ ಭೂಮಿ ಒದಗಿಸಿದರೆ ಡಿಸಿಎಫ್ ಅವರಿಗೆ ಸನ್ಮಾನ ಮಾಡಲಾಗುವುದು’ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.

ಇದಕ್ಕೆ ಉತ್ತರಿಸಿದ ಡಿಸಿಎಫ್ ಸೌರಭ್‌ಕುಮಾರ್‌ ‘ಅರಣ್ಯ ಇಲಾಖೆಗೆ 168 ಹೆಕ್ಟೇರ್‌ ಭೂ ಸ್ವಾಧೀನಕ್ಕೆ ಗುರುತಿಸಲಾಗಿದ್ದು ಸರ್ವೆ ಮಾಡಲು ಜನವರಿ 10ರಂದು ಆದೇಶ ಬಂದಿದೆ. ಕೆಲ ದಿನಗಳಲ್ಲಿ ಜಂಟಿ ಸರ್ವೆ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಾಗುವುದು. ನಂತರ ಅನುಮತಿ ಬಂದರೆ ಯೋಜನೆ ಕಾರ್ಯಗತ ಮಾಡಬಹುದು’ ಎಂದರು.

‘ಇದೇ ವಿಚಾರವಾಗಿ ಹಲವು ವರ್ಷಗಳಿಂದ ಕಾಮಗಾರಿ ವಿಳಂಬವಾಗಿದೆ. ಆದಷ್ಟು ಶೀಘ್ರ ಅನುಮತಿ ನೀಡಬೇಕು. ಈ ಸಮಸ್ಯೆ ಬಗೆಹರಿದರೆ ಮುಂದಿನ ಜಿಲ್ಲೆಗೆ ನೀರು ಹರಿಸಲು ಸಾಧ್ಯವಾಗಲಿದೆ’ ಎಂದು ಶಿವಲಿಂಗೇಗೌಡ ಹೇಳಿದರು.

ಲೋಕಾಯುಕ್ತ ದಾಳಿ: ಅಸಮಾಧಾನ

‘ಜಿಲ್ಲೆಯ ಕೆಲ ಸರ್ಕಾರಿ ಅಧಿಕಾರಿಗಳು ಲಂಚಕ್ಕೆ ಕೈಯೊಡ್ಡಿ ಲೋಕಾಯುಕ್ತ ಬಲೆಗೆ ಬೀಳುತ್ತಿದ್ದು ರಾಜ್ಯಮಟ್ಟದಲ್ಲಿ ಜಿಲ್ಲೆಯ ಹೆಸರು ಹಾಳಾಗುತ್ತಿದೆ’ ಎಂದು ಸಂಸದ ಶ್ರೇಯಸ್ ಪಟೇಲ್ ಅಸಮಾಧಾನ ವ್ಯಕ್ತಪಡಿಸಿದರು.

ಈ ವಿಚಾರವಾಗಿ ರಾಜ್ಯ ಹಾಸನ ಜಿಲ್ಲೆಯತ್ತ ನೋಡುತ್ತಿದೆ. ಜಿಲ್ಲೆಯ ಮರ್ಯಾದೆ ಕಳೆಯುವ ಕೆಲಸ ಮಾಡಬೇಡಿ. ಇಡೀ ಜಿಲ್ಲಾಡಳಿತದ ಮರ್ಯಾದೆ ನಿಮ್ಮ ಕೈಯಲ್ಲಿದೆ. ನಾನು ಎಲ್ಲ ಅಧಿಕಾರಿಗಳು ತಪ್ಪಿತಸ್ಥರೆಂದು ಹೇಳುತ್ತಿಲ್ಲ. ಕೆಳಮಟ್ಟದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕು. ಮುಂದೆ ಈ ರೀತಿಯ ಪ್ರಮಾದಕ್ಕೆ ಆಸ್ಪದ ಕೊಡಬೇಡಿ ಎಂದು ತಾಕೀತು ಮಾಡಿದರು.

Post a Comment

0 Comments