ಮೈಸೂರು: ಕೆ.ಎಸ್.ಆರ್.ಟಿ.ಸಿ ಸಬರ್ಬನ್ ಬಸ್ ನಿಲ್ದಾಣ ನಗರದ ಹೃದಯ ಭಾಗದಲ್ಲಿರುವುದರಿಂದ ಎಲ್ಲದಕ್ಕೂ ಅನುಕೂಲವಾಗಿದೆ. ಈಗ ಸಬರ್ಬನ್ ಬಸ್ ನಿಲ್ದಾಣವನ್ನು ಬನ್ನಿಮಂಟಪಕ್ಕೆ ಸ್ಥಳಾಂತರ ಮಾಡಿದರೆ ಪ್ರಯಾಣಿಕರಿಗೆ ತುಂಬಾ ತೊಂದರೆ ಆಗುತ್ತದೆ ಎಂದು ಹೋರಾಟ ಸಮಿತಿಯ ಸಂಚಾಲಕ ಸಿ ನಾರಾಯಣಗೌಡ ಅವರು ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು ದಸರಾ ಸಂಧರ್ಭದಲ್ಲಿ ಮಾತ್ರ ಒಂದಷ್ಟು ಜನ ದಟ್ಟಣೆಯಾಗುತ್ತದೆಯೇ ಹೊರತು ಉಳಿದ ಸಮಯದಲ್ಲಿ ಏನೂ ಸಮಸ್ಯೆ ಆಗುವುದಿಲ್ಲ. ಮೈಸೂರಿಗೆ ಒಂದು ರೀತಿಯಲ್ಲಿ ಕಳಶಪ್ರಾಯದಂತೆ ನಗರದ ಹೃದಯಭಾಗದಲ್ಲಿರುವ ಕೇಂದ್ರ ಬಸ್ ನಿಲ್ದಾಣವನ್ನು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದು ಎಂದು ಆಗ್ರಹಿಸಿದರು.
ಯಾವುದೇ ಕಾರಣಕ್ಕೂ ಕೇಂದ್ರ ಬಸ್ ನಿಲ್ದಾಣವನ್ನು ಸ್ಥಳಾಂತರ ಮಾಡಬಾರದು ಎಂದು ಮಾನ್ಯ ಮುಖ್ಯಮಂತ್ರಿಗಳಿಗೂ ಹಾಗೂ ಸಾರಿಗೆ ಸಚಿವರಿಗೂ ಮನವಿ ಮಾಡಿದ್ದೇವೆ. ಸಿಎಂ ಸಿದ್ದರಾಮಯ್ಯ ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ಇದೆ ಎಂದರು.
ಈಗಾಗಲೇ ನರ್ಮ್ ಯೋಜನೆಯಡಿ ಸಾತಗಳ್ಳಿ, ನಾಯ್ಡುನಗರ, ಇಲವಾಲ, ಕುವೆಂಪುನಗರ ಬಸ್ ಡಿಪೋಗಳ ಬಳಿ ನಿರ್ಮಾಣ ಮಾಡಿರುವ ಬಸ್ ನಿಲ್ದಾಣಗಳೆಲ್ಲವೂ ನಿಷ್ಕ್ರಿಯವಾಗಿವೆ. ನೂರಾರು ಕೋಟಿ ವೆಚ್ಚ ಮಾಡಿ ಕಟ್ಟಿದ್ದರೂ ನಿರುಪಯುಕ್ತವಾಗಿವೆ. ಈಗ ಸಬರ್ಬನ್ ಬಸ್ ನಿಲ್ದಾಣವನ್ನು ಬನ್ನಿಮಂಟಪಕ್ಕೆ ಸ್ಥಳಾಂತರ ಮಾಡಿದರೆ ಪ್ರಯಾಣಿಕರಿಗೆ ತುಂಬಾ ತೊಂದರೆ ಆಗುತ್ತದೆ. ಅದೂ ಕೂಡ ನಿರುಪಯುಕ್ತವಾಗುವ ಸಾಧ್ಯತೆ ಇದೆ ಎಂದು ಹೋರಾಟ ಸಮಿತಿಯ ಅಧ್ಯಕ್ಷ ರವಿಶಾಸ್ತ್ರಿ ಅವರು ಹೇಳಿದರು.
ಕೇಂದ್ರ ಬಸ್ ನಿಲ್ದಾಣವನ್ನು ಬನ್ನಿಮಂಟಪಕ್ಕೆ ಸ್ಥಳಾಂತರ ಮಾಡುವ ಬದಲು ಪಕ್ಕದಲ್ಲೇ ಇರುವ ಪೀಪಲ್ಸ್ ಪಾರ್ಕ್ ಮತ್ತು ಸರ್ಕಾರಿ ಅತಿಥಿಗೃಹ ಆವರಣದ ಒಂದಷ್ಟು ಜಾಗವನ್ನು ಪಡೆದು ವಿಸ್ತರಣೆ ಮಾಡಬಹುದು ಎಂದರು.
ಹೋರಾಟ ಸಮಿತಿಯ ಉಪಾಧ್ಯಕ್ಷರಾದ ಡಿ ಶ್ರೀಹರಿ, ಕೆ ಬಿ ಲಿಂಗರಾಜು, ಬಿ ಎಸ್ ಪ್ರಶಾಂತ್ ಉಪಸ್ಥಿತರಿದ್ದರು.



0 Comments