ಚಿಕ್ಕಮಗಳೂರು: ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಏಕಾಗ್ರತೆ, ಜ್ಞಾಪಕಶಕ್ತಿ ಹಾಗೂ ಆತ್ಮವಿಶ್ವಾಸದಿಂದ ಕೂಡಿದ್ದರೆ ಮಾತ್ರ ನಿಗದಿತ ಅಂಕಗಳಿಸುವ ಮೂಲಕ ತೇರ್ಗಡೆ ಹೊಂದಬಹುದು ಎಂದು ಎಐಟಿ ಕಾಲೇಜು ಪ್ರಾಂಶುಪಾಲ ಡಾ. ಸಿ.ಟಿ.ಜಯದೇವ್ ಸಲಹೆ ಮಾಡಿದರು.
ನಗರದ ಎಐಟಿ ಕಾಲೇಜಿನ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ವಿಜಯಂಗಮ ಕಾರ್ಯಕ್ರಮ ಪ್ರಯುಕ್ತ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಮತ್ತು ಪರೀಕ್ಷಾ ಸಿದ್ಧತೆ ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಭಾನುವಾರ ಮಾತನಾಡಿ, ಅಂತಿಮ ಪರೀಕ್ಷೆಗಳಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ ಆತಂಕ, ಭಯ ಎನ್ನುವುದು ಸಹಜ. ಕಲಿತ ವಿದ್ಯೆ ಹಾಗೂ ತುಂಬು ಮನಸ್ಸಿನಿಂದ ಪರೀಕ್ಷೆ ಎದುರಿಸಿದರೆ ಪ್ರಶ್ನೆಗಳಿಗೆ ಸಲೀಸಾಗಿ ಉತ್ತರ ಬರೆಯಬಹುದು. ಹೀಗಾಗಿ ಪರೀಕ್ಷಾ ಕೊಠಡಿಗಳಲ್ಲಿ ಎಲ್ಲಾ ಭಯವನ್ನು ಬಿಟ್ಟು ಮುಕ್ತವಾಗಿರ ಬೇಕು ಎಂದು ತಿಳಿಸಿದರು.
ಅಧಿಕ ಅಂಕಗಳಿಸಲು ಕೆಲವರು ದಿನವಿಡಿ ಓದುವ ಹವ್ಯಾಸ ರೂಢಿಸಿಕೊಳ್ಳುತ್ತಾರೆ. ಆದರೆ ಪರೀಕ್ಷೆ ವೇಳೆಯಲ್ಲಿ ಜ್ಞಾಪಕಶಕ್ತಿ ಕುಂದಲಿವೆ. ಹೀಗಾಗಿ ಕನಿಷ್ಟ ಐದಾರು ಗಂಟೆಗಳ ಪಠ್ಯವನ್ನು ಅಭ್ಯಾಸಿಸುವ ಮೂಲಕ ಮನ ದಟ್ಟು ಮಾಡಿಕೊಳ್ಳಬೇಕು. ಇದರಿಂದಾಗಿ ಪರೀಕ್ಷೆ ಎದುರಿಸುವ ಆತ್ಮವಿಶ್ವಾಸ ತಾನಾಗಿಯೇ ಮುನ್ನೆಲೆಗೆ ಬರಲಿದೆ ಎಂದು ಹೇಳಿದರು.
ಪರೀಕ್ಷಾ ಸಮಯದಲ್ಲಿ ಓದಿನ ಜೊತೆಗೆ ಆರೋಗ್ಯ ಕಡೆ ಹೆಚ್ಚು ಗಮನಹರಿಸಬೇಕು. ಸಮಯಕ್ಕೆ ಸರಿಯಾಗಿ ನಿದ್ರೆ, ಊಟ ಸೇವಿಸಬೇಕು. ಮಲಗುವ ಮುನ್ನ ಅಭ್ಯಾಸಿದಂಥ ಪಠ್ಯವನ್ನು ನೆನಪಿಸಿಕೊಳ್ಳಬೇಕು. ಪ್ರಶ್ನೆಗಳು ಪುಸ್ತಕ ಹೊರತಾಗಿ ಇರುವ ಕಾರಣ ಅರ್ಥೈಸಿಕೊಂಡು ಸಕರಾತ್ಮಕ ಮನೋಭಾವದಿಂದ ಎದುರಿಸಿದರೆ ಉನ್ನತ ಸ್ಥಾನದಲ್ಲಿ ಹೊರಹೊಮ್ಮಲು ಸಾಧ್ಯವೆಂದರು.
ಇಟಾಲಿಕ್ ಕೈಬರಹ ತಜ್ಞ ದುಗ್ಗಪ್ಪಗೌಡ ಮಾತನಾಡಿ, ಅಂತಿಮ ಪರೀಕ್ಷೆಗಳಲ್ಲಿ ಮಕ್ಕಳು ಶಕ್ತಿವಂತರಾಗಬೇಕು. ಪರೀಕ್ಷೆ ಎರಡ್ಮೂರು ತಿಂಗಳ ಮುನ್ನವೇ ಕಲಿಕೆಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು. ಶರೀರದ ನರ, ನಾಡಿ ಹಾಗೂ ಮಸ್ತಕದಲ್ಲಿ ಪರೀಕ್ಷೆ ಎದುರಿಸುವ ಸಾಮರ್ಥ್ಯ ಬೆಳೆಸಿಕೊಂಡರೆ ಸುಲಭವಾಗಿ ಮುಂದಿನ ತರ ಗತಿಗೆ ತೇರ್ಗಡೆಯಾಗಲು ಸಾಧ್ಯವೆಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಹಯೋಗ ಮತ್ತು ಪ್ರಚಾರ ವ್ಯವಸ್ಥಾಪಕಿ ಎಸ್.ಡಿ.ಚಂದ್ರಕುಮಾರಿ, ಪರೀಕ್ಷಾ ಕೊಠಡಿಗಳಲ್ಲಿ ಪ್ರಶ್ನೆಪತ್ರಿಕೆ ಕೈಗೆ ದೊರೆತಾಗ ಶಾಂತಿಯಿಂದ ಆಲಿಸಬೇಕು. ಗಾಬರಿಗೊಳ್ಳದೇ ಪ್ರಶ್ನೆಗಳನ್ನು ಅರ್ಥೈಸಿಕೊಂಡು ಮುನ್ನೆಡೆದರೆ ಉತ್ತರಗಳು ಲಭಿಸಲು ಸಾಧ್ಯ. ಹೀಗಾಗಿ ವಿದ್ಯಾರ್ಥಿಗಳು ಹೆಚ್ಚು ಗಾಬರಿಯಾಗದೇ ಸೂಕ್ಷ್ಮವಾಗಿ ಎದುರಿಸಬೇಕೆಂದರು.
ಆದಿಚುಂಚನಗಿರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜಿ.ಆರ್.ಚಂದ್ರಶೇಖರ್ ಮಾತನಾಡಿ, ಕಡೂರು, ಚಿಕ್ಕಮಗಳೂರು ಹಾಗೂ ಜಾವಳಿ ಭಾಗದ ಸಂಸ್ಥೆಯ ವಿದ್ಯಾರ್ಥಿಗಳನ್ನು ಇಂದು ಒಂದೆಡೆ ಸೇರಿಸಿ ಮಾನಸಿಕ ಆರೋಗ್ಯ ಮತ್ತು ಪರೀಕ್ಷಾ ಸಿದ್ಧತೆ ಕಾರ್ಯಾಗಾರ ಹಮ್ಮಿಕೊಂಡು ಆತ್ಮವಿಶ್ವಾಸ ಮೂಡಿಸಲಾಗುತ್ತಿದೆ ಎಂದರು.
ಬಿಜಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲ ಜೆ.ಜಿ.ಸುರೇಂದ್ರ, ಆದಿಚುಂಚನಗಿರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಜಿ.ಆರ್.ಚಂದ್ರಶೇಖರ್, ಪಾಲಿಟೆಕ್ನಿಕ್ ಪ್ರಾಂಶುಪಾಲ ಕೆ.ಎಂ.ಸಚ್ಚಿನ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.



0 Comments