ಆನೆ ಸಮಸ್ಯೆಗೆ ಶಾಶ್ವತ ಪರಿಹಾರ

 ಬೇಲೂರು: ಕೊಡಗು-ಹಾಸನ ಮತ್ತು ಚಿಕ್ಕಮಗಳೂರಿನ ಅರಣ್ಯದ ಹೊರಗೆ ನೆಲೆಸಿರುವ 200 ಕಾಡಾನೆಗಳನ್ನು ಸೆರೆ ಹಿಡಿದು, ಭದ್ರಾ ಅಭಯಾರಣ್ಯದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಆನೆಧಾಮಕ್ಕೆ ಕಳುಹಿಸಿದಲ್ಲಿ ಈ ಮೂರು ಜಿಲ್ಲೆಗಳ ಆನೆ ಹಾವಳಿಗೆ ಶಾಶ್ವತ ಪರಿಹಾರ ಲಭಿಸಲಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.


ಕಾಡಾನೆ ಸಮಸ್ಯೆ ಹಾಗೂ ಬೆಳ ನಾಶ ಕುರಿತು ಪಟ್ಟಣದ ಆರ್.ವಿ.ಕಲ್ಯಾಣ ಮಂಟಪದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಆನೆ-ಮಾನವ ಸಂಘರ್ಷ ಇರುವ ಹಾಸನ-ಕೊಡಗು-ಚಿಕ್ಕಮಗಳೂರು ಜಿಲ್ಲೆಗಳ ಕಾಫಿ ಬೆಳೆಗಾರರು, ರೈತರು ಮತ್ತು ಸಾರ್ವಜನಿಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಈ ಬಾರಿಯ ಆಯವ್ಯಯದಲ್ಲಿ ಆನೆಧಾಮದ ಘೋಷಣೆಯನ್ನು ಮುಖ್ಯಮಂತ್ರಿ ಮಾಡುತ್ತಾರೆಂಬ ವಿಶ್ವಾಸವಿದೆ. ವನ್ಯಜೀವಿಗಳಿಂದ ಅದರಲ್ಲೂ ಆನೆಗಳಿಂದ ಮಾನವರ ಜೀವ ಮತ್ತು ರೈತರ ಬೆಳೆಗೆ ಆಗುತ್ತಿರುವ ಹಾನಿ ತಡೆಗೆ ಅಂತರ ಜಿಲ್ಲಾ ಸಮನ್ವಯತೆ ಮತ್ತು ತಂತ್ರಜ್ಞಾನದ ಸಮರ್ಥ ಬಳಕೆ ಅಗತ್ಯವಾಗಿದೆ ಎಂದರು.


ವನ್ಯಜೀವಿ ದಾಳಿಯಿಂದ ಗಾಯಗೊಂಡು ಅಂಗವಿಕಲರಾಗುವವರಿಗೆ ಹೆಚ್ಚಿನ ಪರಿಹಾರ ನೀಡಬೇಕೆಂಬ ಬೇಡಿಕೆ ಇದೆ. ಈ ಬಗ್ಗೆ ಪರಿಶೀಲಿಸಲಾಗುವುದು. ಅದೇ ರೀತಿ ಬೆಳೆ ಹಾನಿಗೆ ಶೀಘ್ರ ಪರಿಹಾರ ಪಾವತಿಸುವ ವ್ಯವಸ್ಥೆ ಜಾರಿಗೆ ತರಲು ಯೋಜನೆ ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು.


ಇಂದು ವಿಶ್ವ ವನ್ಯಜೀವಿ ದಿನವಾಗಿದ್ದು, ಕಾಡು ಪ್ರಾಣಿಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ದಿನವಾಗಿದೆ. ಅದೇ ದಿನ ವನ್ಯಜೀವಿಗಳಿಂದ ಮಾನವರ ಅಮೂಲ್ಯ ಜೀವ ರಕ್ಷಿಸುವ ಕುರಿತು ಮಾರ್ಗೋಪಾಯಗಳ ಬಗ್ಗೆ ಚರ್ಚಿಸುವ ಸಲುವಾಗಿ ಈ ಸಭೆ ನಡೆಸಲಾಗುತ್ತಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ನಂತರ ಪ್ರಾಣಿ ಬೇಟೆ ನಿಷೇಧಿಸಿ, ವನ್ಯ ಜೀವಿಗಳ ಸಂರಕ್ಷಣೆ ಮಾಡಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆದರೆ ಅದಕ್ಕೆ ಅನುಗುಣವಾಗಿ ಅರಣ್ಯ ಪ್ರದೇಶ ಇಲ್ಲ. ಇದು ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗಿದೆ. ಅಲ್ಲದೆ ರಸ್ತೆ, ನೀರು, ವಿದ್ಯುತ್ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅರಣ್ಯ ಪ್ರದೇಶ ವಿಭಜನೆಯಾಗಿರುವುದೂ ಆನೆ-ಮಾನವ ಸಂಘರ್ಷಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ವನ್ಯಜೀವಿಗಳಿಂದ ಅಮೂಲ್ಯವಾದ ಮಾನವ ಜೀವಕ್ಕೆ ಹಾನಿ ಆಗುವುದನ್ನು ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.



ಜಿಲ್ಲೆಯಲ್ಲಿ ಕಳೆದ 2 ವರ್ಷದಲ್ಲಿ 7 ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ. ಸಾಮಾನ್ಯವಾಗಿ ಗುಂಪಿನ ನೇತತ್ವ ವಹಿಸುವ ಹೆಣ್ಣಾನೆಯನ್ನು ಗುರುತಿಸಿ ರೇಡಿಯೋ ಕಾಲರ್ ಅಳವಡಿಸಿದರೆ ಆನೆಗಳ ಚಲನವಲನದ ಬಗ್ಗೆ ನಿಗಾ ಇಡಲು ಅನುಕೂಲ. ಪ್ರಸ್ತುತ ದೇಸಿಯವಾಗಿ ರೇಡಿಯೋ ಕಾಲರ್ ಅಭಿವೃದ್ಧಿಪಡಿಸಿದ್ದು, ಹೆಚ್ಚಿನ ರೇಡಿಯೋ ಕಾಲರ್ ಅಳವಡಿಸಲು ಕ್ರಮ ವಹಿಸಲಾಗಿದೆ. ಆನೆಗಳ ಚಲನವಲನದ ಬಗ್ಗೆ ಜಿಲ್ಲಾಡಳಿತ, ಗ್ರಾಮ ಪಂಚಾಯಿತಿ ಮತ್ತು ಸಂಬಂಧಿತ ಗ್ರಾಮದ ಜನರಿಗೆ ಮಾಹಿತಿ ನೀಡಲು ವಾಟ್ಸ್‌ಆ್ಯಪ್ ಗ್ರೂಪ್ ರಚಿಸಲು ಸೂಚಿಸಲಾಗಿದೆ. ಈ ಮೂಲಕ ಜನರನ್ನು ಎಚ್ಚರಿಸಿದರೆ ಸಾವಿನ ಸಂಖ್ಯೆ ತಡೆಯಬಹುದಾಗಿದೆ ಎಂದರು.


ಆನೆಗಳ ಸಂಸತಿ ನಿಯಂತ್ರಿಸಲು ಸಂತಾನಶಕ್ತಿ ಹರಣ ಪ್ರಕ್ರಿಯೆ ನಡೆಸಬೇಕು ಎಂಬ ಸಲಹೆ ಬಂದಿದೆ. ಈ ನಿಟ್ಟಿನಲ್ಲಿ ಭಾರತೀಯ ವಿಜ್ಞಾನ ಮಂದಿರ(ಐಐಎಸ್‌ಸಿ)ಕ್ಕೆ ಜಾಗತಿಕವಾಗಿ ಆನೆಗಳ ಸಂತಾನ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಅಧ್ಯಯನ ನಡೆಸುವ ಹೊಣೆ ನೀಡಲಾಗಿದೆ. ಅಧ್ಯಯನ ವರದಿ ಬಂದ ಬಳಿಕ ಸುಪ್ರೀಂಕೋರ್ಟ್ ತೀರ್ಪು, ವನ್ಯಜೀವಿ ಸಂರಕ್ಷಣಾ ಕಾಯ್ದೆ ನಿಯಮಾವಳಿಗಳ ರೀತ್ಯಾಕ್ರಮ ವಹಿಸಲಾಗುವುದು ಎಂದರು.


ಆನೆಗಳಿಗೆ ಕಾಡಿನಲ್ಲಿ ಆಹಾರ ಮತ್ತು ನೀರಿನ ವ್ಯವಸ್ಥೆಯಾದಲ್ಲಿ ಅವು ನಾಡಿಗೆ ಬರುವುದಿಲ್ಲ ಎಂಬ ಅಭಿಪ್ರಾಯವಿದ್ದು, ಈ ಹಿನ್ನೆಲೆಯಲ್ಲಿ ಕಾಡಿನಲ್ಲಿ ಹಂತ ಹಂತವಾಗಿ ನೀಲಗಿರಿ ಮತ್ತು ಅಕೇಶಿಯಾ ಮರಗಳನ್ನು ತೆರವುಗೊಳಿಸಲಾಗುವುದು. ಅಲ್ಲದೆ ಆನೆಗಳಿಗೆ ಪ್ರಿಯವಾದ ಬಿದಿರು, ಬೈನೆ, ವಾಟೆ, ಹಲಸು, ಹುಲ್ಲು ಇತ್ಯಾದಿ ಬೆಳೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.


ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಅಧಿವೇಶನದಲ್ಲಿ ಕಾಡಾನೆಗಳ ಬಗ್ಗೆ ಚರ್ಚಿಸಿದ್ದೇನೆ. ಅರಣ್ಯ ಸಚಿವರೊಂದಿಗೆ ಮಾತನಾಡಿದ್ದೇನೆ. ಮಂತ್ರಿಗಳಿಗಿರುವ ಸಹನೆ ಅಧಿಕಾರಿಗಳಿಗಿಲ್ಲ. ಮಂತ್ರಿಗಳು ಮಾತು ಕೊಟ್ಟಂತೆ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಜತೆಗೆ ಶಾಶ್ವತವಾದ ಪರಿಹಾರ ಬೇಕಿದೆ. ಕಾಡಾನೆಗಳಿಂದ ಮುಂದೆ ಯಾವುದೇ ಸಾವಾಗಬಾರದು. ಜತೆಗೆ ತಕ್ಷಣವೇ ಕೊಡಿಸುವ ವ್ಯವಸ್ಥೆ ಮಾಡಬೇಕಿದೆ ಎಂದು ಹೇಳಿದರು.


ಸ್ಥಳೀಯ ಬೆಳೆಗಾರರಿಗೆ ಶೇ.100 ರಷ್ಟು ಸಬ್ಸಿಡಿಯಲ್ಲಿ ಸೋಲಾರ್ ಬೇಲಿ ಹಾಕಿಕೊಳ್ಳಲು ಅವಕಾಶ ಕೊಡಬೇಕು. 24 ಗಂಟೆ ವಿದ್ಯುತ್ ಕೊಡಬೇಕು. ಆನೆ ಧಾಮ ಮಾಡುವುದಕ್ಕೆ ಸರ್ಕಾರ 500 ಕೋಟಿ ರೂ. ಮೀಸಲಿಟ್ಟು ಬಿಡುಗಡೆ ಮಾಡಬೇಕು. ಈಗಿನ ಪರಿಹಾರವನ್ನು ನಾಲ್ಕು ಪಟ್ಟು ಹೆಚ್ಚಿಸಬೇಕು. ಜತೆಗೆ ಈಗ ಇಲಾಖೆಯಿಂದ ಬರುತ್ತಿರುವ ಅನುದಾನ ಸರಿಯಾಗಿ ಬಳಕೆಯಾಗುತ್ತಿಲ್ಲ. ಅರಣ್ಯ ಪ್ರದೇಶದಲ್ಲಿರುವ ಸಣ್ಣಪುಟ್ಟ ರೈತರನ್ನು ಒಕ್ಕಲೆಬ್ಬಿಸಲು ಅಧಿಕಾರಿಗಳು ಮುಂದಾಗದಂತೆ ಎಚ್ಚರ ವಹಿಸಬೇಕೆಂದು ಮನವಿ ಮಾಡಿದರು.


ಸಭೆಯಲ್ಲಿ ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ರಾಜೇಗೌಡ, ಸಿಮೆಂಟ್ ಮಂಜು, ಮಾಜಿ ಸಚಿವ ಬಿ.ಶಿವರಾಂ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ, ಜಿಲ್ಲಾಧಿಕಾರಿ ಸತ್ಯಭಾಮಾ, ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಚಿತಾ ಸೇರಿದಂತೆ ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ರೈತ ಮುಖಂಡರು ಇದ್ದರು.

Post a Comment

0 Comments