*ಹಾಸನ ಮಹಾನಗರ ಪಾಲಿಕೆಗೆ 30 ಕೋಟಿ ಅನುದಾನ ಬಿಡುಗಡೆ : ಭೂ ಸಾರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಬರವಸೆ*

 

ಹಾಸನ: ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿರುವ ಹಾಸನ ನಗರ ವ್ಯಾಪ್ತಿಯ 30 ಪ್ರಮುಖ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು 30 ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆಗೆ ಕ್ರಮ ವಹಿಸುವುದಾಗಿ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ.

ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಮೂಲಸೌಕರ್ಯ ಉನ್ನತೀಕರಿಸಲು ವಿಶೇಷ ಹಾಗೂ ಹೆಚ್ಚುವರಿ ಅನುದಾನ ನೀಡಬೇಕೆಂದು ಮೇ 28 ರಂದು ಮಾಜಿ ಪ್ರಧಾನಿ ಹೆಚ್ .ಡಿ. ದೇವೇಗೌಡ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದರು.

 ಅದಕ್ಕೆ ಪೂರಕವಾಗಿ ಸ್ಪಂದಿಸಿರುವ ಕೇಂದ್ರ ಸಚಿವರು, ತಮ್ಮ ಪತ್ರ ವಿಷಯ ಗಮನಕ್ಕೆ ಬಂದಿದ್ದು, ನಿಮ್ಮ ಕಾಳಜಿ, ಸದುದ್ದೇಶಕ್ಕೆ ಧನ್ಯವಾದಗಳು. ನಿಮ್ಮ ಕೋರಿಕೆ ಪರಿಗಣಿಸಲಾಗುವುದು. ಅನುದಾನ ಬಿಡುಗಡೆಗೆ ಅನುಮತಿ ನೀಡುವ ಭರವಸೆ ನೀಡಿ ಕಳೆದ ಜೂ.6 ರಂದು ದೇವೇಗೌಡರಿಗೆ ಸಚಿವರು ಮರುಪತ್ರದ ಮೂಲಕ ಪ್ರತಿಕ್ರಿಯಿಸಿದ್ದಾರೆ.


ಶಾಸಕ ಹೆಚ್.ಪಿ. ಸ್ವರೂಪ್ ಸಹ, ಮೇ 23 ರಂದು ದೇವೇಗೌಡರಿಗೆಪತ್ರ ಬರೆದು ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೊಸದಾಗಿ 37 ಹಳ್ಳಿಗಳು ಸೇರ್ಪಡೆ ಆಗಿವೆ. ಆ ಎಲ್ಲ ಹಳ್ಳಿಗಳಿಗೆ ಅತ್ಯಗತ್ಯವಾಗಿ ಬೇಕಿರುವ ರಸ್ತೆ, ಚರಂಡಿ, ವಿದ್ಯುತ್, ಕುಡಿಯುವ ನೀರು, ಸ್ವಚ್ಛತೆ ಇತ್ಯಾದಿ ಮೂಲಭೂತ ಸೌಕರ್ಯ ಕಲ್ಪಿಸಬೇಕಿದೆ. ಅದಕ್ಕಾಗಿ ಹೆಚ್ಚುವರಿಯಾಗಿ ಸಿ ಆರ್. ಎಫ್ ನಿಧಿಯಿಂದ 30 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು.

ಎಲ್ಲಾ 35 ವಾರ್ಡ್ ವ್ಯಾಪ್ತಿಯಲ್ಲಿ ಪ್ರಮುಖವಾಗಿ ರಸ್ತೆ ಅಭಿವೃದ್ಧಿ, ಒಳ ಚರಂಡಿ ನಿರ್ಮಾಣ ಸೇರಿದಂತೆ ಅನೇಕ ಕಾಮಗಾರಿ ಕೈಗೊಳ್ಳಬೇಕಿದೆ ಯಾವ ವಾರ್ಡ್‌ಗೆ ಎಷ್ಟು ಅನುದಾನದ ಅಗತ್ಯವಿದೆ ಎಂದು ಪತ್ರದಲ್ಲಿ ವಿವರಿಸಿದ್ದರು. ಜೊತೆಗೆ ಆಗಬೇಕಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸ್ವರೂಪ್ ಸಭೆ ನಡೆಸಿದ್ದರು.


ರಾಜ್ಯ ಸರ್ಕಾರಕ್ಕೂ ಪತ್ರ: ಇದಕ್ಕೂ ಮುನ್ನ ಇದೇ ದೇವೇಗೌಡರ ಮೂಲಕ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದ ಸ್ವರೂಪ್, ನಗರಸಭೆಯನ್ನು ಮೇಲ್ದರ್ಜೆಗೇರಿಸಿ ಸುತ್ತಲಿನ 25 ಗ್ರಾಮಗಳನ್ನು ಮಹಾನಗರ ಪಾಲಿಕೆಗೆ ಸೇರ್ಪಡೆ ಮಾಡಿರುವುದರಿಂದ ಸದರಿ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸಲು ವಿಶೇಷ ಅನುದಾನ ಬಿಡುಗಡೆ ಮಾಡಿಸಿಕೊಡಬೇಕೆಂದು ಕೋರಿದ್ದರು.

Post a Comment

0 Comments