ಅರಕಲಗೂಡು: ಮನುಷ್ಯ ಜನಾಂಗೀಯ ದ್ವೇಷ ಬೆಳೆಸಿಕೊಳ್ಳದೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸದ್ಗುಣವಂತರಾಗಿ ಸಾಧಕರಾಗಬೇಕು ಎಂದು ಹೊಸದುರ್ಗ ಕುಂಚಗಿರಿ ಮಹಾಸಂಸ್ಥಾನ ಪೀಠಾಧಿಪತಿ ಶ್ರೀ ಶಾಂತವೀರ ಸ್ವಾಮೀಜಿ ಪ್ರತಿಪಾದಿಸಿದರು.
ತಾಲೂಕಿನ ಗಡಿಭಾಗದ ಶಿರಂಗಾಲ ಉಮಾಮಹೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ತಾಲೂಕು ಕುಂಚಿಟಿಗ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಸಂಘದ 12ನೇ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಮತ್ತು ಕೇಂದ್ರ ಒಬಿಸಿ ಮೀಸಲು ಹಕ್ಕೊತ್ತಾಯ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಯಾವುದೇ ಒಂದು ಜನಾಂಗ ಇಲ್ಲವೇ ಒಬ್ಬ ವ್ಯಕ್ತಿ ಶ್ರೇಷ್ಠನೂ ಅಲ್ಲ, ಕನಿಷ್ಠನೂ ಅಲ್ಲ. ಸಾಧನೆಯಿಂದ ಮಾತ್ರ ಸಾಧಕರಾಗಬೇಕು. ರಾಗ-ದ್ವೇಷ ಸಾಧಿಸದೆ ಬೇರೆ ಸಮಾಜದವರೊಂದಿಗೆ ಹೊಂದಾಣಿಕೆ ಮನೋಭಾವ ಬೆಳೆಸಿಕೊಳ್ಳಬೇಕು. ಉತ್ತಮ ಶಿಕ್ಷಣ ಪಡೆದು ಸೃಜನಶೀಲರಾಗಬೇಕು. ಸಮಾಜದ ಸಹಕಾರದಿಂದ ಬೆಳೆದ ಸ್ವಾಮೀಜಿಗಳಾಗಲಿ, ರಾಜಕಾರಣಿಗಳಾಗಲಿ ಸಮಾಜದ ಹಿತ ಕಡೆಗಣಿಸದೆ ಅವರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ತಿಳಿಸಿದರು.ದೇಶದಲ್ಲಿ ಏನಾದರೂ ಉನ್ನತ ಸಾಧನೆ ಮಾಡಿದ್ದರೆ ಅವರು ಬಡ ಕುಟುಂಬದಿಂದ ಬಂದವರೇ ಆಗಿದ್ದಾರೆ. ರಾಜ್ಯದಲ್ಲಿ ಉತ್ತಮ ಸಂಘವೆಂದು ಗುರುತಿಸಿಕೊಂಡಿರುವ ತಾಲೂಕು ಕುಂಚಿಟಿಗರ ಸಂವು ಕಳೆದ 12 ವರ್ಷ ಒಳ್ಳೆಯ ಕಾಯಕ ಸೇವೆ ಮಾಡಿಕೊಂಡು ಮುನ್ನಡೆಯುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿ, ಎಲ್ಲಕ್ಕಿಂತ ಬದುಕಿನ ಶಿಕ್ಷಣವೇ ಮುಖ್ಯ, ಇದಕ್ಕಾಗಿ ಬದುಕಿಗೆ ದಾರಿದೀಪವಾಗುವಂತಹ ಶಿಕ್ಷಣವನ್ನು ಗಳಿಸಬೇಕು. ಪಾಲಕರು ತಮ್ಮ ಮಕ್ಕಳಿಗೆ ಪರಸ್ಪರ ಪ್ರೀತಿ, ವಿಶ್ವಾಸ ಕಲಿಸುವ ಶಿಕ್ಷಣವನ್ನು ನೀಡಬೇಕಾಗಿದೆ. ಇದರಿಂದ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲಿದೆ. ಇಂತಹ ಶಿಕ್ಷಣಕ್ಕಾಗಿ ಸಂಘವು ಪ್ರೋತ್ಸಾಹದಾಯಕವಾದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಆಯೋಜಿಸಿರುವುದು ಶ್ಲಾಘನೀಯವಾಗಿದೆ ಎಂದರು.
ತಾಲೂಕು ಕುಂಚಿಟಿಗರ ಸಂಘದ ಅಧ್ಯಕ್ಷ ಎಂ.ಟಿ.ಪಾಂಡುರಂಗ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎ.ಮಂಜು, ಬೆಂಗಳೂರು ಕುಂಚಿಟಿಗ ಮಹಾ ಮಂಡಲ ಅಧ್ಯಕ್ಷ ರಂಗಹನುಮಯ್ಯ, ಮುಖಂಡರಾದ ಗೋವಿಂದೇಗೌಡ, ತಿಮ್ಮೇಗೌಡ, ಎಸ್.ಕೆ.ಚಂದ್ರಪ್ಪ, ವೈ.ಟಿ.ಕುಮಾರ್, ಎಚ್.ವಿ.ಕೃಷ್ಣೇಗೌಡ, ಅಣ್ಣೇಗೌಡ, ಆರ್. ಕೃಷ್ಣ, ಅರ್ಪಿತಾ ಮನು, ಹರೀಶ್, ಈರೇಗೌಡ ಇತರರಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸಭೆಯಲ್ಲಿ ಕೇಂದ್ರ ಒಬಿಸಿ ಮೀಸಲು ಹಕ್ಕೊತ್ತಾಯ ಮಂಡಿಸಲಾಯಿತು.



0 Comments