ತೀರ್ಥಹಳ್ಳಿ / ಕುಪ್ಪಳ್ಳಿ : ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕಳಕಳಿ ಹೊಂದಿ ಕಾರ್ಯೋನ್ಮುಖವಾಗುವ ಕನ್ನಡಪರ ಸಂಘಟನೆಗಳಿಗೆ ಪಾರದರ್ಶಕತೆ, ಪ್ರಾಮಾಣಿಕತೆ, ತತ್ತ÷್ವ ಸಿದ್ಧಾಂಥ ಹಾಗೂ ಬದ್ಧತೆ ಬಹಳ ಮುಖ್ಯ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷರಾದ ಡಾ. ಹಸೀನಾ ಎಚ್.ಕೆ. ಅವರು ತೀರ್ಥಹಳ್ಳಿ ತಾಲ್ಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ನೂತನ ಅಧ್ಯಕ್ಷೆಯಾದ ಸುಜಾತ ಎಸ್. ಹೇಮಂತ್ ಅವರಿಗೆ ಪದಗ್ರಹಣ ನೆರವೇರಿಸಿದರು.
ತೀರ್ಥಹಳ್ಳಿ ತುಂಗಾ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ. ಬಿ. ಗಣಪತಿ ರಾಜ್ಯದ ವಿವಿಧ ಭಾಗದ ಸಾಧಕರಿಗೆ “ಶರಣ ಸಂಕುಲ ರತ್ನ ರಾಜ್ಯ ಪ್ರಶಸ್ತಿ” ಪ್ರದಾನ ಮಾಡಿ ಮಾತನಾಡಿ ಕುವೆಂಪು ಊರಾದ ಕುಪ್ಪಳಿಯ ಹೇಮಾಂಗಣದಲ್ಲಿ ನಾವೆಲ್ಲರೂ ಸೇರಿದ್ದೇವೆ. ನೀವೆಲ್ಲರೂ ಕರ್ನಾಟಕದ ಬೇರೆ ಬೇರೆ ಊರುಗಳಿಂದ ಇಲ್ಲಿಗೆ ಬಂದಿದ್ದೀರಿ. ಬೇರೆ ಬೇರೆ ವೃತ್ತಿ ಮಾಡುವವರಿದ್ದೀರಿ. ಸ್ವತಃ ಕವಿಗಳೂ ಸಾಹಿತ್ಯ ರಚಕರೂ ಆಗಿದ್ದೀರಿ. ಇವತ್ತು ಇಲ್ಲಿ ಶರಣ ಸಾಹಿತ್ಯ ರತ್ನ ಪ್ರಶಸ್ತಿಯನ್ನು ಪಡೆದ ಎಲ್ಲಾ ಸಾಹಿತ್ಯ ರತ್ನಗಳಿಗೂ ಅಭಿನಂದನೆಗಳು. ಪ್ರಶಸ್ತಿಗಳು ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ನಾನೊಂದು ಕಿವಿಮಾತು ಹೇಳಿದರೆ ತಾವ್ಯಾರೂ ಅನ್ಯಥಾ ಭಾವಿಸಬಾರದು. ಇಂದು ಗಿಡಗಳನ್ನು ಬೆಳೆಸುವವರಿಗೆ ಬೇಕಾದಷ್ಟು ಕಸಿಮಾಡಿದ ಗಿಡಗಳು ಸಿಗುತ್ತವೆ. ಏಕೆಂದರೆ ದಾರಿಯ ಬದಿಗಳಲ್ಲಿ ಹಲವು ನರ್ಸರಿಗಳು ತಲೆಯೆತ್ತಿವೆ. ಅಲ್ಲಿಂದ ಗಿಡಗಳನ್ನು ತಂದು ಹಣ್ಣಿನ ತೋಟ ಮಾಡುವವರಿಗೆ ನರ್ಸರಿಮನ್ ಒಂದು ಎಚ್ಚರಿಕೆ ಕೊಡುತ್ತಾನೆ. ಅದೇನೆಂದರೆ ಎರಡು ಮೂರು ವರ್ಷ ಈ ಗಿಡಗಳಲ್ಲಿ ಹೂ ಹೀಚು ಕಾಯಿಗಳು ಬಂದರೆ ಅವುಗಳನ್ನು ಕಿತ್ತುಹಾಕಿ; ಹಾಗೆ ಮಾಡದಿದ್ದರೆ ಗಿಡಗಳ ಬೆಳವಣಿಗೆ ಚೆನ್ನಾಗುವುದಿಲ್ಲ. ಭವಿಷ್ಯದ ತೋಟದ ಸಮೃದ್ಧಿ ಹೆಚ್ಚುವುದಿಲ್ಲ ಅಂತ. ಹೊಸ ಕವಿಗಳು, ಇದೀಗ ಬರವಣಿಗೆ ಆರಂಭಿಸಿದ ಬರಹಗಾರರು ತಮ್ಮ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಅವಸರಿಸದೇ ಹಣ್ಣಿನ ತೋಟ ಮಾಡುವ ತೋಟಗಾರನಂತೆ ತಮ್ಮ ಬರಹಗಳನ್ನು ಕೆಲವು ಕಾಲ ಇಟ್ಟುಕೊಂಡು ಮತ್ತೆ ಮತ್ತೆ ಓದಬೇಕು; ಹಾಗೆ ಓದುವಾಗೆಲ್ಲಾ ಚೆನ್ನಾಗಿದೆ ಅನ್ನಿಸಿದರೆ, ಇದನ್ನು ಬೇರೆಯವರೂ ಓದಬೇಕು ಅನ್ನಿಸಿದರೆ ಆಗ ಪುಸ್ತಕ ರೂಪದಲ್ಲಿ ಪ್ರಕಟಿಸಬೇಕು. ಕುವೆಂಪು ಅವರ ಕಾವ್ಯ-ಸಾಹಿತ್ಯ ರಾಶಿಯಲ್ಲಿ ನನಗೆ ಬಹಳ ಮುಖ್ಯವಾದ ಎರಡು ಸಾಲುಗಳು ಹೀಗಿವೆ. "ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?" ಅಂತ. ಹೀಗೆ ಹೇಳುವ ಮೂಲಕ ಕುವೆಂಪು ನಮ್ಮ ಇಡೀ ಮನುಕುಲದ ಕಾಲ ದೇಶಗಳನ್ನು ಮೀರಿ ಯೋಚಿಸುವ ಅಗತ್ಯವನ್ನು ಮನಗಾಣಿಸಿದ್ದಾರೆ. ಕವಿ, ಬರಹಗಾರ ಯಾವಾಗಲೂ ಮೌಢ್ಯಬಿಟ್ಟು ವಾಸ್ತವದ ವರ್ತಮಾನಕ್ಕೆ ತೆರೆದುಕೊಳ್ಳಬೇಕು. ಮಿತಿಗಳನ್ನು ಮೀರಿ ಬೆಳೆಯಬೇಕು. ಅದಕ್ಕಾಗಿ ಸುವಿಶಾಲ ಆಲೋಚನೆ ಮಾಡಬೇಕು. ಅಂತಹ ಕವಿ ಬರಹಗಾರರ ಹುಟ್ಟಿಗೆ ನಿಮ್ಮ ಬಳಗ ಕಾರಣವಾಗಲಿ. ಒಂದು ಭಿನ್ನ ಕಾರಣಕ್ಕಾಗಿ ರಚನೆಗೊಂಡ ಈ ಸಾಹಿತ್ಯ ವೇದಿಕೆ ನಿಮಗೆ ಆ ಬಗೆಯ ಬೆಳಕು ತೋರಲಿ. ಅದಕ್ಕಾಗಿ ತಾವೆಲ್ಲರೂ ಸಾಹಿತ್ಯವನ್ನು ಧ್ಯನಸ್ಥ ಸ್ತಿತಿಯಲ್ಲಿ ಬಳಸಿ ಎಂದು ಕೋರುವೆ ಎಂದರು.
ಬೆಂಗಳೂರಿನ ಲಕ್ಷ್ಮೀ ಸಿ.ಎಚ್; ತೀಥಹಳ್ಳಿಯ ಪ್ರೊ. ಹರೀಶ್ ಟಿ.ಜಿ.; ಹಾಸನದ ರೇಖಾ ಪ್ರಕಾಶ್ ಹಾಗೂ ಆಲೂರಿನ ಚಂದ್ರಕಲಾ ಎಂ. ರವರುಗಳಿಗೆ ೨೦೨೫ ನೇ ಸಾಲಿನ “ಶರಣ ಸಂಕುಲ ರತ್ನ ರಾಜ್ಯ ಪ್ರಶಸ್ತಿ”ಗೆ ಭಾಜನರಾದರು.




0 Comments